Saturday 4 February 2012

ಹಕ್ಕಿಪಿಕ್ಕಿ: ಪಕ್ಷಿರಾಜರಿಗೀಗ ಬೇಟೆಯಿಲ್ಲ

ಇವರು ಪಕ್ಷಿ ಸಂಕುಲಕ್ಕೇ ರಾಜರು. ಆದರೆ, ಪಕ್ಷಿಗಳು ಮಾತ್ರ ಸಿಗುತ್ತಿಲ್ಲ. ಕಾಡಿನರಸರೆಂಬ ಪ್ರತೀತಿಯೂ ಇದೆಯಾದರೂ ಕಾಡು ಪ್ರಾಣಿಗಳನ್ನು ಮುಟ್ಟಲು ಅರಣ್ಯ ರಕ್ಷಕರು ಬಿಡುವುದಿಲ್ಲ. ಇತ್ತ ಕೃಷಿ ಮಾಡೋಣವೆಂದರೆ ಭೂಮಿಯೂ ಇಲ್ಲ.
ಹೀಗಾಗಿ ಇದ್ದ ಬೇಟೆ ವೃತ್ತಿ ಕೈಬಿಟ್ಟಿದೆ. ಬೇಟೆಯಾಡುತ್ತಿದ್ದ ಹಲವು ಕೈಗಳಿಗೆ ಇಂದು ಭಿಕ್ಷೆ ಬೇಡುವ ಪರಿಸ್ಥಿತಿ. ಈ ದೈನೇಸಿ ಜೀವನ ಸಾಗಿಸುತ್ತಿರುವವರು ಹಕ್ಕಿಪಿಕ್ಕಿ ಸಮುದಾಯ.
ಹುಟ್ಟೂರು ದೂರದ ಗುಜರಾತ್. ಸ್ವಾತಂತ್ರ್ಯಪೂರ್ವದಲ್ಲಿ ಕಾಡುಮೇಡುಗಳಲ್ಲಿ ಬೇಟೆಯಾಡುತ್ತಾ ದೇಶದ ವಿವಿಧ ರಾಜ್ಯಗಳಲ್ಲಿ ಹಂಚಿಹೋಗಿದೆ ಈ ಸಮುದಾಯ. ಅದೇ ರೀತಿ ಕರ್ನಾಟಕದ ಮೈಸೂರು ಜಿಲ್ಲೆಯ ಹುಣಸೂರಿನಲ್ಲಿ ಮೊದಲು ನೆಲೆಗೊಂಡರು. ಸುತ್ತಲೂ ಇರುವ ಸಣ್ಣಪುಟ್ಟ ಕಾಡಿನಲ್ಲಿ ಬೇಟೆಯಾಡುತ್ತಾ ಕೈಗೆ ಸಿಕ್ಕ ಕಾಡು ಪ್ರಾಣಿಗಳನ್ನು ಒಡೆದುರುಳಿಸುತ್ತಿದ್ದರು. ಹೀಗೆ ಪ್ರಾಣಿ ಪಕ್ಷಿಗಳನ್ನು ಬೇಟೆಯಾಡಿ ಅದರ ಮಾಂಸವನ್ನು ಮಾರಾಟ ಮಾಡುತ್ತಿದ್ದರು.
ಇದರಿಂದ ಬಂದ ಹಣದಿಂದ ಜೀವನ ಸಾಗಿಸುತ್ತಿದ್ದರು. ಆದರೆ, ದಿನ ಕಳೆದಂತೆ ಅರಣ್ಯ ಕಾನೂನುಗಳು ಬಿಗಿಗೊಳ್ಳುತ್ತಾ ಬಂದವು. ಪರಿಣಾಮ ಈ ಹಕ್ಕಿಪಿಕ್ಕಿ ಸಮುದಾಯ ಕಕ್ಕಾಬಿಕ್ಕಿಯಾಯಿತು. ಏಕೆಂದರೆ, ನಂಬಿಕೊಂಡಿದ್ದ ಬೇಟೆಯನ್ನೇ ಇಂತಹ ಕಠಿಣ ಕಾನೂನುಗಳು ಕಿತ್ತುಕೊಂಡಿದ್ದವು.
ರಾಜ್ಯದಲ್ಲಿ ಹೆಗ್ಗಡದೇವನಕೋಟೆ, ನಾಗಮಂಗಲ, ಕೆಂಗೇರಿ, ಪಾಂಡವಪುರ, ಚಾಮರಾಜನಗರ, ಶಿವಮೊಗ್ಗ, ಕೋಲಾರ, ಬೀದರ್, ಕುಂಬಳಗೋಡು, ಚಿಕ್ಕಬಳ್ಳಾಪುರ, ಕನಕಪುರ, ಹುಬ್ಬಳ್ಳಿ, ಬನ್ನೇರುಘಟ್ಟ ಸೇರಿದಂತೆ ಬಹುತೇಕ ಜಿಲ್ಲೆಗಳಲ್ಲಿ ಈ ಸಮುದಾಯದ ಕುಟುಂಬಗಳಿವೆ.
ಬೇಟೆಯಾಡುತ್ತಾ ಊರಿಂದ ಊರಿಗೆ ಅಲೆಯುತ್ತಿದ್ದ ಇವರನ್ನು ಆದಿವಾಸಿ ಅಲೆಮಾರಿ ಬುಡಕಟ್ಟು ಸಮುದಾಯದ ವರ್ಗವೆಂದು ಹೇಳಲಾಗುತ್ತದೆ. ಹತ್ತಾರು ಕುಟುಂಬಗಳು ಸೇರಿ ಊರಿನ ಹೊರಗೆ ಖಾಲಿ ಜಾಗವೊಂದರಲ್ಲಿ ಟೆಂಟ್್ಗಳನ್ನು ಹಾಕಿಕೊಂಡು ಅಲ್ಲಿಯೇ ಕೆಲ ದಿನ ಅಥವಾ ತಿಂಗಳ ಕಾಲ ಜೀವನ ಸಾಗಿಸುತ್ತಿದ್ದರು.
ಹೀಗೆ ಹುಣಸೂರು ತಾಲೂಕಿನ ಒಂದು ಪ್ರದೇಶದಲ್ಲಿ ವಾಸವಾಗಿದ್ದ ಈ ಸಮುದಾಯವನ್ನು ಕಂಡುಅಂದಿನ ಮುಖ್ಯಮಂತ್ರಿ ದೇವರಾಜ್ ಅರಸು ಅವರು ಮಮ್ಮಲ ಮರುಗಿದ್ದರು. ಸಮುದಾಯಕ್ಕೆ ಒಂದು ನೆಲೆ ನೀಡಬೇಕೆಂದು ಪಣ ತೊಟ್ಟ ಅರಸು ಅವರು ಹಕ್ಕಿಪಿಕ್ಕಿ ಕುಟುಂಬಗಳು ನೆಲೆಸಿದ್ದ ಪ್ರದೇಶವನ್ನೇ 'ಪಕ್ಷಿರಾಜಪುರ' ಎಂದುನಾಮಕರಣ ಮಾಡಿದರು. ಈ ಪ್ರದೇಶದಿಂದ 2 ಕಿಲೋ ಮೀಟರ್ ದೂರದಲ್ಲಿ ವಾಸಿಸುತ್ತಿದ್ದ ಪ್ರದೇಶಕ್ಕೆ ಎರಡನೇ ಪಕ್ಷಿರಾಜಪುರ ಎಂದು ನಾಮಕರಣ ಮಾಡಿದರು. ಗರುಡ ಚಿಹ್ನೆಯನ್ನೂ ನೀಡಿದ್ದರಂತೆ. ಅಂದಿನಿಂದ ಇಂದಿನವರೆಗೆ ಸಮುದಾಯದವರ ಬೇಟೆಗೆ ಪಕ್ಷಿಗಳು ಸಿಗದಿದ್ದರೂ ಇವರು ಪಕ್ಷಿರಾಜರಾಗಿದ್ದಾರೆ.
ಹೀಗೆ ವಿವಿಧ ಜಿಲ್ಲೆಗಳಲ್ಲಿ ಹರಿದು ಹಂಚಿ ಹೋಗಿರುವ ಸಮುದಾಯಕ್ಕೆ ಸೇರಿದ ಸುಮಾರು 25 ರಿಂದ 30 ಸಾವಿರ ಜನರಿದ್ದಾರೆ.
ಇವರಲ್ಲಿ ಬೇಟೆ ಸ್ಥಗಿತಗೊಳ್ಳುತ್ತಿದ್ದಂತೆ ಹಕ್ಕಿಪಿಕ್ಕಿಗಳಿಗೆ ದಿಕ್ಕು ತೋಚದಂತಾಯಿತು. ಇದೇ ವೇಳೆ ಸ್ವಲ್ಪ ಮಟ್ಟಿಗೆ ನೆರವಿಗೆ ಬಂದದ್ದು ಸರ್ಕಾರ. ಕೆಲವು ಹಳ್ಳಿಗಳ ಹಕ್ಕಿಪಿಕ್ಕಿ ಕುಟುಂಬಗಳಿಗೆ ಸರ್ಕಾರದ ಭೂಮಿಯನ್ನು ವ್ಯವಸಾಯ ಮಾಡಲು ಬಿಟ್ಟುಕೊಟ್ಟಿತು. ಈ ಜಮೀನಿನಲ್ಲಿ ಕೆಲವರು ಕೃಷಿಯನ್ನು ನಡೆಸಿದರೆ, ಮತ್ತೆ ಕೆಲವರು ಅಲೆಮಾರಿಗಳಾದರು. ಊರಿಂದ ಊರಿಗೆ ವಲಸೆ ಹೋಗುತ್ತಾ ಸಣ್ಣ ಪುಟ್ಟ ಕೂಲಿ ಕೆಲಸಗಳನ್ನು ರೂಢಿಸಿಕೊಂಡು ಬಂದಿದ್ದಾರೆ.
ಸಮುದಾಯದ ವಿಶೇಷವೆಂದರೆ, ಬಹುತೇಕ ಜನ ಆಸ್ಪತ್ರೆ ಮುಖವನ್ನೇ ನೋಡುವುದಿಲ್ಲ. ಏಕೆಂದರೆ, ಬೇಟೆಯಾಡುತ್ತಾ ಕಾಡಿಗೆ ಹೋಗುತ್ತಿದ್ದ ಅವರು ಬೇಟೆಯ ಜತೆಗೆ ಗಿಡಮೂಲಿಕೆಗಳನ್ನೂ ಸಂಗ್ರಹಿಸುತ್ತಿದ್ದರು. ಇದೇ ಅವರಿಗೆ ಸಿದ್ಧೌಷಧ. ಎಂತಹ ರೋಗವಾದರೂ ಗಿಡಮೂಲಿಕೆಗಳಿಂದ ತಯಾರಿಸುವ ಔಷಧಿಯನ್ನು ನೀಡುವುದು ವಾಡಿಕೆ. ಇಂತಹ ಔಷಧಿಯನ್ನು ತಯಾರಿಸುವ ವೃತ್ತಿಯನ್ನೇ ಕೆಲವರು ಮುಂದುವರೆಸಿದ್ದಾರೆ.
ಮತ್ತೆ ಕೆಲವು ಕುಟುಂಬಗಳ ಮಹಿಳೆಯರು ಕಟ್ಟುವ ಪ್ಲಾಸ್ಟಿಕ್ ಹೂವು, ತೋರಣವನ್ನು ಪುರುಷರು ನಗರ, ಪಟ್ಟಣ ಪ್ರದೇಶಗಳಿಗೆ ತಂದು ಮಾರಾಟ ಮಾಡುತ್ತಾರೆ.
ಬಹುತೇಕ ಮಂದಿ ಅನಕ್ಷರಸ್ಥರಾದರೂ ವ್ಯಾಪಾರ ವೃತ್ತಿಯಲ್ಲಿ ಹಿಂದೆ ಬಿದ್ದಿಲ್ಲ. ಪ್ಲಾಸ್ಟಿಕ್ ಹೂವು ಸೇರಿದಂತೆ ಹತ್ತು ಹಲವಾರು ಅಲಂಕಾರಿಕಾ ವಸ್ತುಗಳನ್ನು ಹೊರ ರಾಜ್ಯಗಳಿಂದ ಖರೀದಿಸಿ ನಮ್ಮ ರಾಜ್ಯದ ಗ್ರಾಹಕರಿಗೆ ಮಾರಾಟ ಮಾಡುತ್ತಿದ್ದಾರೆ. ಅಷ್ಟೇ ಅಲ್ಲ. ನಗರ ಪ್ರದೇಶಗಳಲ್ಲಿ ಆಯೋಜನೆಗೊಳ್ಳಲಿರುವ ವಸ್ತು ಪ್ರದರ್ಶನಗಳಲ್ಲಿ ಇವರದೊಂದು ಮಳಿಗೆ ಇರುತ್ತದೆ. ಅಲ್ಲಿ ಅಲಂಕಾರಿಕಾ ವಸ್ತುಗಳನ್ನು ಪ್ರದರ್ಶನಕ್ಕಿಡುತ್ತಾರೆ.
ಇದರೊಂದಿಗೆ ಗಿಡಮೂಲಿಕೆಗಳಿಂದ ತಯಾರಿಸಿದ ಔಷಧಗಳು ಮತ್ತು ಇತರೆ ವಸ್ತುಗಳ ಬಗ್ಗೆ ಮಾಹಿತಿಯನ್ನೂ ನೀಡುತ್ತಾರೆ ಮತ್ತು ವಸ್ತುಗಳ ಮಾರಾಟವನ್ನೂ ಮಾಡುತ್ತಾರೆ. ಇದರಲ್ಲಿ ಬಂದ ಅಲ್ಪಸ್ವಲ್ಪ ಲಾಭದಿಂದ ಜೀವನ ಸಾಗುತ್ತಿದೆ.
ಇಂತಹ ವ್ಯಾಪಾರದಲ್ಲಿ ತೊಡಗಿರುವ ಈ ವರ್ಗ ಒಂದು ರೀತಿಯಲ್ಲಿ ಎಲೈಟ್ ಗುಂಪಿಗೆ ಸೇರಿದ್ದು.
ನಗರ ಪ್ರದೇಶದಲ್ಲಿ ಇನ್ನೂ ಒಂದು ವರ್ಗವಿದೆ. ಬೆಂಗಳೂರಿನಂತಹ ನಗರಗಳಲ್ಲಿ ವಾಸಿಸುತ್ತಿರುವ ಈ ಸಮುದಾಯದ ಕುಟುಂಬಗಳಲ್ಲಿ ಕೆಲವು ಬೀಡಿ ಕಟ್ಟುವ ಕಾಯಕದಲ್ಲಿ ತೊಡಗಿದ್ದರೆ, ಮತ್ತೆ ಕೆಲವು ರಸ್ತೆ ಬದಿಯಲ್ಲಿ, ವೃತ್ತಗಳಲ್ಲಿ ಭಿಕ್ಷೆ ಬೇಡಿ ಜೀವನ ಸಾಗಿಸುವ ಕಾಯಕ ಮುಂದುವರೆಸಿವೆ.
ಗ್ರಾಮಾಂತರ ಪ್ರದೇಶದಲ್ಲಿರುವ ಮತ್ತು ಕಾಡಿನಂಚಿನಲ್ಲಿರುವ ಹಕ್ಕಿಪಿಕ್ಕಿ ಸಮುದಾಯ ಬಹುತೇಕ ಬೇಟೆಗಾರಿಕೆಯನ್ನು ನಿಲ್ಲಿಸಿದ್ದರೂ ಅರಣ್ಯ ಅಥವಾ ಅದರ ಸುತ್ತಮುತ್ತ ಯಾವುದಾದರೂ ಪ್ರಾಣಿ ಸಾವನ್ನಪ್ಪಿದರೆ ಇವರೇ ಕಾರಣಕರ್ತರೆಂಬ ಕೇಸುಗಳನ್ನು ಹಾಕಲಾಗುತ್ತಿದೆ. ಈ ಮೂಲಕ ಅರಣ್ಯ ಮತ್ತು ಪೊಲೀಸ್ ಇಲಾಖೆ ಕಿರುಕುಳ ನೀಡುತ್ತಿವೆ ಎಂಬ ಅಳಲನ್ನು ಸಮುದಾಯ ತೋಡಿಕೊಳ್ಳುತ್ತಿದೆ. ಆದರೆ, ಇದಕ್ಕೆ ಕಿವಿಗೊಡುವ ಗೋಜಿಗೆ ಯಾರೂ ಹೋಗುತ್ತಿಲ್ಲ.
ಸಾಮಾಜಿಕವಾಗಿ ತೀರ ಹಿಂದುಳಿದಿರುವ ಈ ಸಮುದಾಯವನ್ನು ಪರಿಶಿಷ್ಟ ಪಂಗಡವೆಂದು ಪರಿಗಣಿಸಲಾಗಿದೆ. ಉದ್ಯೋಗ, ಶಿಕ್ಷಣ ಸೇರಿದಂತೆ ಮತ್ತಿತರೆ ಮೀಸಲಾತಿಯೂ ಈ ವರ್ಗಕ್ಕಿದೆ. ಆದರೆ, ಮಾಹಿತಿ ಮತ್ತು ಸಂಪರ್ಕದ ಕೊರತೆ, ಅವಿದ್ಯಾವಂತರಿಂದಾಗಿ ಮೀಸಲಾತಿ ಸೌಲಭ್ಯ ಸಮರ್ಪಕವಾಗಿ ತಲುಪುತ್ತಿಲ್ಲ. ಉದ್ಯೋಗ ಪಡೆದುಕೊಳ್ಳುವಂತಹ ವಿದ್ಯಾರ್ಹತೆ ಇಲ್ಲದವರೇ ಇದ್ದಾರೆ. ಹೀಗಾಗಿ ಸರ್ಕಾರಿ ಉದ್ಯೋಗವೆಂಬುದು ಇವರಿಗೆ ಗಗನ ಕುಸುಮವಾಗಿದೆ.
ನಗರ ಪ್ರದೇಶಗಳಲ್ಲಿ ಓಡಾಡಿಕೊಂಡಿರುವ ಹಿನ್ನೆಲೆಯಲ್ಲಿ ಸಮುದಾಯದಲ್ಲಿ ಸ್ವಲ್ಪ ಜಾಗೃತಿ ಮೂಡುತ್ತಿದೆ. ಇತರರನ್ನು ಪ್ರಶ್ನಿಸುವ ಸಾಮಾನ್ಯ ಜ್ಞಾನ ಪಡೆದುಕೊಳ್ಳುತ್ತಿದ್ದಾರೆ. ಇನ್ನು ಕೆಲವರು ಹತ್ತನೇ ತರಗತಿ ಪೂರ್ಣಗೊಳಿಸಿ ಕಾಲೇಜು ಮೆಟ್ಟಿಲು ಹತ್ತಿದ್ದಾರೆ. ಸುಮಾರು 10 ಕ್ಕೂ ಹೆಚ್ಚು ಮಂದಿ ಗ್ರಾಮಪಂಚಾಯ್ತಿ ಚುನಾವಣೆಯಲ್ಲಿ ಆಯ್ಕೆಯಾಗಿ ಜನಪ್ರತಿನಿಧಿಗಳಾಗಿದ್ದಾರೆ. ಈ ಮೂಲಕ ತಮ್ಮ ಸಮುದಾಯ ಇರುವ ಗ್ರಾಮಗಳ ಉದ್ಧಾರಕ್ಕಾಗಿ ಪಣ ತೊಟ್ಟಿದ್ದಾರೆ.
ಈ ಸ್ವಲ್ಪ ಮಟ್ಟಿನ ಶೈಕ್ಷಣಿಕ ಏಳ್ಗೆಯನ್ನು ಹೊರತುಪಡಿಸಿದರೆ ಹಕ್ಕಿಪಿಕ್ಕಿ ಸಮುದಾಯ ಆರ್ಥಿಕವಾಗಿಯಾಗಲೀ ಅಥವಾ ಸಾಮಾಜಿಕವಾಗಿಯಾಗಲೀ ಮುಂದೆ ಬರಲು ಇನ್ನೂ ಎಣಗಾಡುತ್ತಿದೆ.
ಗುಜರಾತಿ ಇವರ ಮಾತೃಭಾಷೆ. ಮರಾಠಿ, ಕೊಂಕಣಿ, ಹಿಂದಿ ಭಾಷೆಗಳ ಮಂದಿ ಇವರ ಭಾಷೆಯನ್ನು ಸುಲಭವಾಗಿ ಅರ್ಥೈಸಿಕೊಳ್ಳಬಲ್ಲರು.
ಸಮುದಾಯದಲ್ಲಿ ಪ್ರಮುಖವಾಗಿ ಕಾಳಿವಾಳ್, ಮೆವಾಡು ಮತ್ತು ಗುಜರಾತೋ ಎಂಬ ಮೂರು ಪಂಗಡಗಳಿವೆ.
ಈ ಮೂರು ಪಂಗಡಗಳ ಮಧ್ಯೆ ಸಂಬಂಧಗಳು ಬೆಳೆಯುತ್ತವೆ. ಆದರೆ, ಆಚರಣೆ ಮಾತ್ರ ಸ್ವಲ್ಪ ವಿಭಿನ್ನ.
ಕಾಳಿವಾಳ್ ಪಂಗಡದವರು ಕಾಳಿಕಾದೇವಿಯನ್ನು ಪೂಜಿಸಿದರೆ, ಮೆವಾಡು ಅವರಿಗೆ ಯಲ್ಲಮ್ಮ ಆರಾಧ್ಯದೈವ. ಗುಜರಾತೋ ಅವರಿಗೆ ಚಾಮುಂಡಿದೇವಿ.
ಹಬ್ಬ ಹರಿದಿನಗಳಲ್ಲಿ ಗುಜರಾತೋ ಪಂಗಡದವರು ದೇವಿಗೆ ಕೋಣವನ್ನು ಬಲಿ ಕೊಟ್ಟರೆ, ಉಳಿದೆರಡು ಪಂಗಡಗಳು ಕುರಿಯನ್ನು ಬಲಿ ಕೊಡುತ್ತವೆ. ಕಾಳಿವಾಳ್ ಮತ್ತು ಮೆವಾಡ್ ಪಂಗಡದ ಹೆಣ್ಣು ಗುಜರಾತೋ ಪಂಗಡದ ಗಂಡನ್ನು ಮದುವೆಯಾದರೆ ತನ್ನ ತವರು ಮನೆಯಲ್ಲಿ ಹಬ್ಬಗಳಂದು ಬಲಿ ಕೊಡುವ ಕುರಿಯನ್ನು ತಿನ್ನುವಂತಿಲ್ಲ. ಅದೇ ರೀತಿ ಗುಜರಾತೋ ಪಂಗಡದ ಹೆಣ್ಣು ಕಾಳಿವಾಳ್ ಅಥವಾ ಮೆವಾಡ್ ಪಂಗಡದ ಗಂಡನ್ನು ಮದುವೆಯಾದರೆ ತನ್ನ ತವರು ಮನೆಯಲ್ಲಿ ಬಲಿಕೊಡುವ ಕೋಣವನ್ನು ತಿನ್ನುವುದು ನಿಷಿದ್ಧ.
ನಮ್ಮ ಸಮುದಾಯಕ್ಕೆ ಸರ್ಕಾರದ ಯೋಜನೆಗಳ ಸೌಲಭ್ಯಗಳು ಸಿಗುತ್ತಿಲ್ಲ. ಇದುವರೆಗೆ ಸೌಲಭ್ಯಗಳು ಇವೆ ಎಂಬುದೇ ಗೊತ್ತಾಗದೇ ಸಮುದಾಯ
ಕತ್ತಲಲ್ಲಿತ್ತು. ನಮಗೆ ಮೊದಲು ಆಗಬೇಕಿರುವ ಕೆಲಸವೆಂದರೆ ಸಮುದಾಯದ ಹೆಚ್ಚು ಕುಟುಂಬಗಳು ಇರುವ ಕಡೆ ಶಾಲೆ ಮತ್ತು ಹಾಸ್ಟೆಲ್ ಆರಂಭಿಸಬೇಕು.
ಅದೇ ರೀತಿ ನಮ್ಮ ಕೃಷಿ ಭೂಮಿಗಳನ್ನು ನೀರಾವರಿ ವ್ಯವಸ್ಥೆಗೆ ಸೇರಿಸಬೇಕು -ಶೀನು ಸತೀಶ್್ಕುಮಾರ್, ಹಕ್ಕಿಪಿಕ್ಕಿ ಸಮುದಾಯದ ನಾಯಕಿ.

No comments:

Post a Comment