Saturday 4 February 2012

ಬೆಸ್ತರ ಗಾಳಕ್ಕೆ ಇನ್ನೂ ಸಿಕ್ಕಿಲ್ಲ ನೆಮ್ಮದಿ

ಚುಕ್ಕಾಣ ಚುಕ್ಕಿ ಹೊಯ್ಯ ಚುಕ್ಕಾಣ ಚುಕ್ಕಿ ಹೊಯ್ಯ........
ಅಲ್ಲೇ ಇದೆಯೋ ಬಾನಲ್ಲೇ ಇದೆಯೋ ಹೊಯ್ಯ......
ಸಂಜೆಗತ್ತಲಲ್ಲಿ ನೀಲಿ ಆಕಾಶದ ನಕ್ಷತ್ರಗಳನ್ನು ಎಣಿಸುತ್ತಾ ಸಮುದ್ರದಲೆಗಳ ಮಧ್ಯೆ ಬಿರುಸಾಗಿ ಬಲೆ ಬೀಸುತ್ತಾ ಮೀನು ಹಿಡಿಯುವಾಗಿನ ಈ ಪಾಡ್ದನ ಈಗ ನೆನಪು ಮಾತ್ರ.
ಕಿವಿಗಿಂಪಾಗುವ ಈ ಪಾಡ್ದನ ಹಾಡುತ್ತಾ ಮೀನು ಹಿಡಿಯುವ ಕಾಯಕದಲ್ಲಿ ತೊಡಗಿದ್ದ ಕರಾವಳಿಯ ಮೊಗವೀರರ ಮೊಗದಲ್ಲಿ ಮಂದಹಾಸವಿಲ್ಲ.
ಇತ್ತ ಬಯಲು ಸೀಮೆ ಎನಿಸಿರುವ ಉತ್ತರ ಕರ್ನಾಟಕ ಸೇರಿದಂತೆ ರಾಜ್ಯದ ಬಹುತೇಕ ಎಲ್ಲಾ ಜಿಲ್ಲೆಗಳಲ್ಲಿ ತಾವು ಗಂಗೆಯ ವಂಶಸ್ಥರು ಎನಿಸಿಕೊಳ್ಳುತ್ತಿರುವ ಗಂಗಾಮತಸ್ಥರಿಗೆ ಗಂಗೆಯೇ ಕೃಪೆ ತೋರುತ್ತಿಲ್ಲ.
ಮೀನು ಹಿಡಿಯುವುದನ್ನು ಬಿಟ್ಟರೆ ಬೇರಾವುದೇ ಕೆಲಸ ಗೊತ್ತಿಲ್ಲದಂತಿರುವ ಬೆಸ್ತನ ಬದುಕಿನಲ್ಲಿನ ಬೆಸುಗೆ ಬಿಟ್ಟಿದೆ.
ಇದು ರಾಜ್ಯದಲ್ಲಿ ಇರುವ ಮೀನುಗಾರರು ಅಂದರೆ, ಬೆಸ್ತ ಸಮುದಾಯದ ಈಗಿನ ದುಸ್ಥಿತಿ.
ಮೀನು ತಿಂದವರು ಅದರಲ್ಲೂ ಸಮುದ್ರದ ಮೀನು ತಿಂದವರ ಬುದ್ಧಿಮತ್ಥೆ ಹೆಚ್ಚಾಗುತ್ತದೆ. ಚುರುಕಿನಿಂದ ಚಾಲಾಕಿಗಳಾಗಿರುತ್ತಾರೆ ಎಂಬ ಪ್ರತೀತಿ ಇದೆ. ಆದರೆ, ಇದೇ ಮೀನು ತಿನ್ನಿಸುವವರ ಬದುಕು 'ಮಂದ'ವಾಗಿದೆ.
ಕೃಷಿ ಕ್ಷೇತ್ರದಲ್ಲೇ ಮೀನುಗಾರಿಕೆಯನ್ನೂ ಸೇರಿಸಲಾಗಿದೆ. ಆದರೆ, ಕೃಷಿಕರಿಗೆ ಸಿಕ್ಕಷ್ಟು ಸವಲತ್ತುಗಳು ಮೀನುಗಾರರಿಗೆ ಸಿಗುತ್ತಿಲ್ಲ.
ಇವರಿಗೆ ಬುಟ್ಟಿ ತುಂಬ ಮೀನು ಹಿಡಿದರಷ್ಟೇ ಹೊಟ್ಟೆ ತುಂಬುತ್ತದೆ. ಇಲ್ಲವಾದರೆ, ಹೊಟ್ಟೆಗೆ ತಣ್ಣೀರು ಬಟ್ಟೆಯೇ ಗತಿ.
ಮೀನು ಕೃಷಿಯನ್ನು ಅವಲಂಬಿಸಿರುವ 39 ಕ್ಕೂ ಹೆಚ್ಚು ಉಪ ಸಮುದಾಯಗಳು ನಮ್ಮಲ್ಲಿವೆ. ಪ್ರಾದೇಶಿಕತೆಗೆ ತಕ್ಕಂತೆ ಈ ಸಮುದಾಯವನ್ನು ನಾನಾ ಹೆಸರಿನಲ್ಲಿ ಕರೆಯಲಾಗುತ್ತದೆ. ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು, ಉತ್ತರ ಕನ್ನಡದಲ್ಲಿ ಇವರನ್ನು ಮೊಗವೀರ, ಮೊಗೇರಾ(ಆಡು ಭಾಷೆಯಲ್ಲಿ ಮೊಗವೀರರನ್ನು ಹೀಗೆ ಕರೆಯಲಾಗುತ್ತದೆ), ಗಂಗಾಮತಸ್ಥ, ಬೆಸ್ತ, ಮಜಿದಾ, ಅಂಬಿಗಾ, ಅಂಬಿಗೇರ್, ಕಬ್ಬಲಿಗ, ಸುನಗಾರ, ಚಾಲುವಾರ, ಕಬ್ಬೇರು, ಕೋಳಿ, ನಾಟಿಕಾರ್, ಟೋಕರೆ ಕೋಳಿ, ಕೋಯ, ಬಿನ್ನಕೋಯ ಹೀಗೆ ಹಲವು ಹೆಸರು ಇವೆ.
ರಾಜ್ಯದಲ್ಲಿ ನಡೆಯುತ್ತಿರುವ ಮೀನು ಕೃಷಿಯಲ್ಲಿ ಶೇ. 70 ಕ್ಕಿಂತಲೂ ಹೆಚ್ಚು ಸಮುದ್ರದಲ್ಲಿ ಆಗುತ್ತದೆ. ಹೀಗಾಗಿ ಮೀನುಗಾರಿಕೆ ಸಮೃದ್ಧವಾಗಿದ್ದರೂ ಈ ಸಮುದಾಯ ಇದು ಹೊಂದಿಕೆಯಾಗುತ್ತಿಲ್ಲ. ಏಕೆಂದರೆ, ಈ ಮೀನುಗಾರರ ಜಾಗದಲ್ಲಿ ಈಗ ಯಾಂತ್ರೀಕೃತ ದೋಣಿಗಳು, ಹಡಗುಗಳು ಬಂದಿವೆ. ಈ ಮೂಲಕ ಮೀನುಗಾರರ ಬಹುತೇಕ ಕೆಲಸವನ್ನು ಕಸಿದುಕೊಂಡಿವೆ. ಅಲ್ಲದೇ, ಸ್ಥಿತಿವಂತ ಮೊಗವೀರರು ಇಂತಹ ಅತ್ಯಾಧುನಿಕ ದೋಣಿ ಮತ್ತು ಹಡಗು ಹೊಂದಿದ್ದು, ಅವರ ಬಳಿ ಉಳಿದ ಮೀನುಗಾರರು ದಿನಕ್ಕಿಷ್ಟು ಸಂಬಳಕ್ಕೆ ಮೀನು ಹಿಡಿಯುವ ಕಾಯಕಕ್ಕೆ ಹೋಗಬೇಕು.
ಈ ಕಾರಣದಿಂದ ಮೊಗವೀರರಲ್ಲಿ ಬಹುತೇಕ ಮಂದಿ ತಮ್ಮ ವೃತ್ತಿಯನ್ನು ಬಿಟ್ಟು ನಗರಗಳಿಗೆ ಉದ್ಯೋಗ ಹರಸಿ ವಲಸೆ ಹೋಗುತ್ತಿದ್ದಾರೆ. ಅಲ್ಪಸ್ವಲ್ಪ ಜಮೀನು ಇದ್ದವರು ಕೃಷಿಗೆ ಪರಿವರ್ತಿತರಾಗಿದ್ದರೆ, ಮತ್ತೆ ಹಲವು ಮಂದಿಯ ಜೀವನಕ್ಕೆ ಕೂಲಿ ಕೆಲಸಗಳು ಆಸರೆಯಾಗಿವೆ.
ಹೀಗೆ ವಲಸೆ ಹೋದವರಲ್ಲಿ ಬಹುತೇಕ ಜನರು ಶೈಕ್ಷಣಿಕವಾಗಿ ಮುಂದೆ ಬಂದಿದ್ದು ಸ್ವಯಂಉದ್ಯೋಗ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡು ಆರ್ಥಿಕವಾಗಿ ಸಬಲರಾಗಿದ್ದಾರೆ. ದೂರದ ಮುಂಬೈಗೆ ಸಾಕಷ್ಟು ಜನ ವಲಸೆ ಹೋಗಿದ್ದು, ಅಲ್ಲಿ ಹೊಟೇಲ್ ಉದ್ಯಮದಲ್ಲಿ ತಲ್ಲೀನರಾಗಿದ್ದಾರೆ. ಹೀಗಾಗಿ ಕರಾವಳಿ ಪ್ರದೇಶದ ಮೀನುಗಾರ ಸಮುದಾಯದವರಲ್ಲಿ ಶೇ. 35 ರಿಂದ 40 ಮಂದಿ ಮೀನುಗಾರಿಕೆಯನ್ನೇ ಮುಂದುವರೆಸಿಕೊಂಡು ಆರ್ಥಿಕ, ಶೈಕ್ಷಣಿಕವಾಗಿ ಮೇಲೇರದೇ ಇದ್ದ ಸ್ಥಿತಿಯಲ್ಲೇ ಇದ್ದರೆ, ಉಳಿದವರು ನಗರ ಪ್ರದೇಶಗಳಲ್ಲಿ ಉತ್ತಮ ಸ್ಥಿತಿಯ ಜೀವನ ಸಾಗಿಸುತ್ತಿದ್ದಾರೆ.
ಈ ಕರಾವಳಿ ಪ್ರದೇಶದ ಮೀನುಗಾರರ ಪರಿಸ್ಥಿತಿಗೂ ಉತ್ತರ ಕರ್ನಾಟಕ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿರುವ ಮೀನುಗಾರರಿಗೂ ಅಜಗಜಾಂತರ ವ್ಯತ್ಯಾಸವನ್ನು ಕಾಣಬಹುದು.
ಬೆಸ್ತರೆಂದೂ ಕರೆಯಿಸಿಕೊಳ್ಳುವ ಈ ಸಮುದಾಯ ಉತ್ತರ ಕರ್ನಾಟಕ, ಮುಂಬೈ ಮತ್ತು ಹೈದ್ರಾಬಾದ್ ಕರ್ನಾಟಕದಲ್ಲಿ ಹೆಚ್ಚು ಕೇಂದ್ರೀಕೃತವಾಗಿದೆ. ಈ ಭಾಗದವರಿಗೆ ಬೆಸ್ತರು, ಗಂಗಾಮತಸ್ಥರು, ಕೋಯಿ, ಕೋಳಿ, ಚಾಲುವಾರ, ಕಬ್ಬೇರು, ಕೋಳಿ, ನಾಟಿಕಾರ್, ಟೋಕರೆ ಕೋಳಿ, ಕೋಯ, ಬಿನ್ನಕೋಯ ಸೇರಿದಂತೆ ಹಲವು ಹೆಸರಿನಿಂದ ಕರೆಯಲಾಗುತ್ತದೆ.
ಇವರೆಲ್ಲಾ ಆರ್ಥಿಕವಾಗಿ ತೀರಾ ಹಿಂದುಳಿದವರು. ಬಹುತೇಕ ಮಂದಿ ತುಂಗಭದ್ರಾ, ಕೃಷ್ಣಾ, ಭೀಮ, ಕಾವೇರಿ ಸೇರಿದಂತೆ ಹಲವು ನದಿ ತೀರದಲ್ಲಿದ್ದು, ಇಲ್ಲಿಯೇ ಮೀನುಗಾರಿಕೆ ಮಾಡುತ್ತಿದ್ದಾರೆ. ಆದರೆ, ಇವರಲ್ಲಿ ಶೇ. 95 ಕ್ಕಿಂತಲೂ ಹೆಚ್ಚು ಆರ್ಥಿಕವಾಗಿ ಹಿಂದುಳಿದವರು, ಸರ್ಕಾರಿ ಅಥವಾ ಖಾಸಗಿ ಉದ್ಯೋಗ ಗಿಟ್ಟಿಸುವಷ್ಟು ಶೈಕ್ಷಣಿಕವಾಗಿ ಮುಂದುವರೆದಿಲ್ಲ.
ಈ ಸಮುದಾಯದ ಮೀನು ಕೃಷಿಯ ವೃತ್ತಿಯನ್ನು ಇತರೆ ಧರ್ಮೀಯರು ಮತ್ತು ಮೇಲ್ವರ್ಗದ ಜನರು ಕಿತ್ತುಕೊಂಡಿದ್ದಾರೆ. ಮೀನುಗಾರಿಕೆಗೆ ಅಗತ್ಯವಾದ ಆಧುನಿಕ ದೋಣಿಗಳನ್ನು ಖರೀದಿಸಲು ಇವರು ಅಶಕ್ತರು. ಕೇವಲ ಉಟ್ಟು ಹಾಕಿ ದಿನವಿಡೀ ಮೀನು ಹಿಡಿದು ಮಾರಾಟ ಮಾಡಿದರೂ ಕುಟುಂಬದ ಸದಸ್ಯರ ಹೊಟ್ಟೆ ತುಂಬಿಸುವುದೂ ಕಷ್ಟವಾಗಿದೆ. ಅಲ್ಲದೇ, ಆಡಳಿತಗಳ ಕಟ್ಟುನಿಟ್ಟಾದ ಕಾನೂನುಗಳಿಂದ ಮೀನು ಹಿಡಿಯಲಾರದಷ್ಟು ಸ್ಥಿತಿಗೆ ಬಂದಿದ್ದಾರೆ ಇವರು. ಏಕೆಂದರೆ, ನದಿ ಮತ್ತು ಹಳ್ಳಿಗಳಲ್ಲಿರುವ ದೊಡ್ಡ ದೊಡ್ಡ ಕೆರೆಗಳಲ್ಲಿ ಮೀನು ಸಾಕಾಣಿಕೆ ಮಾಡಲಾಗುತ್ತದೆ. ಹಣವಂತರು ಗುತ್ತಿಗೆ ತೆಗೆದುಕೊಂಡು ಈ ಮೀನುಗಳನ್ನು ಶೇಖರಿಸಿ ದುಪ್ಪಟ್ಟು ಬೆಲೆಗೆ ಮಾರಾಟ ಮಾಡುತ್ತಾರೆ. ಆದರೆ, ಇದೇ ವೃತ್ತಿಯನ್ನು ಹೊಂದಿರುವ ಬೆಸ್ತರಿಗೆ ಅಥವಾ ಗಂಗಾಮತಸ್ಥರಿಗೆ ಈ ಗುತ್ತಿಗೆ ಸಿಗುವುದಿಲ್ಲ. ಏಕೆಂದರೆ, ಇವರು ಹಣವಂತರಿಗೆ ಸ್ಪರ್ಧೆ ನೀಡುವಷ್ಟು ಸ್ಥಿತಿಯಲ್ಲಿಲ್ಲ.
ಗಂಗಾಮತಸ್ಥರು ಎಂದಾಕ್ಷಣ ಪಾವಿತ್ರ್ಯವಂತರು ಎಂದು ಈ ಸಮುದಾಯವನ್ನು ನಮ್ಮ ಸಮಾಜ ಪರಿಗಣಿಸುತ್ತಿಲ್ಲ. ಈಗಿನ ಪ್ರಜ್ಞಾವಂತ ಸಮಾಜ ಇವರನ್ನು ಅಸ್ಪೃಶ್ಯರೆಂದೇ ಭಾವಿಸಿದೆ. ಹೀಗಾಗಿ ಈ ಸಮುದಾಯವನ್ನು ಊರಿನಿಂದ ಹೊರಗಿಡುವ ಕೆಟ್ಟ ಸಂದ್ರದಾಯ ಇನ್ನೂ ಚಾಲ್ತಿಯಲ್ಲಿರುವುದು ತಲೆ ತಗ್ಗಿಸುವ ಸಂಗತಿ. ಮೇಲ್ಜಾತಿಯವರ ಬಳಿ ಇವರು ಸರಿ ಸಮಾನರಾಗಿ ನಿಲ್ಲುವಂತಿಲ್ಲ. ಮೇಲ್ಜಾತಿಯವರು ಕುಳಿತುಕೊಳ್ಳುವ ಗ್ರಾಮದ ಅರಳಿ ಕಟ್ಟೆಯಲ್ಲಿ ಇವರು ಕುಳಿತುಕೊಳ್ಳುವಂತಿಲ್ಲ. ಇದೇ ಮೇಲ್ಜಾತಿಯವರ ಮನೆಯಲ್ಲಿ ಕೂಲಿ ಮಾಡಿದರೂ ಅವರ ಮನೆಗಳ ಒಳಗೆ ಹೋಗುವಂತಿಲ್ಲ. ಮನೆಯ ಹಿಂಬಾಗಿಲು ಅಥವಾ ಮುಂಬಾಗಿಲ ಹೊಸ್ತಿಲಲ್ಲಿ ಇವರಿಗೆ ಪ್ರತ್ಯೇಕವಾದ ತಟ್ಟೆಯಲ್ಲಿ ಊಟಕ್ಕಿಟ್ಟು ಕಳುಹಿಸುತ್ತಾರೆ ಮೇಲ್ಜಾತಿಯವರು.
ಊರ ದೇವಾಲಯಗಳಿಗೆ ಪ್ರವೇಶ ನಿಷಿದ್ಧ. ಊರಿನಿಂದ ಸ್ವಲ್ಪ ದೂರದಲ್ಲಿ ದಲಿತರ ಕೇರಿಗಳಿದ್ದರೆ, ಗಂಗಾಮತಸ್ಥರ ಕೇರಿ ಸ್ವಲ್ಪ ಹತ್ತಿರದಲ್ಲಿರುತ್ತದೆ. ಇಂತಹ ಹೀನಾಯ ಜೀವನ ಇವರದ್ದು.
ಸಮಾಜ ಗಂಗಾಮತಸ್ಥ ಅಥವಾ ಬೆಸ್ತರನ್ನು ಈ ರೀತಿ ನೋಡಿದರೆ, ಈ ಆಧುನಿಕ ಯುಗದಲ್ಲೂ ಸಮುದಾಯ ತನ್ನ ಹಳೆಯ ಕಂದಾಚಾರಗಳನ್ನು ಬಿಟ್ಟಿಲ್ಲ. ಅನಿಷ್ಟ ಪದ್ಧತಿಗಳಲ್ಲಿ ಒಂದಾದ ದೇವದಾಸಿ ಪದ್ಧತಿಯನ್ನು ಇನ್ನೂ ರೂಢಿಸಿಕೊಂಡು ಬಂದಿದೆ ಈ ಸಮುದಾಯ. ಇಂತಹ ಪದ್ಧತಿ ಆಚರಿಸುವುದು ಬೇಡ ಎಂದು ತಿಳಿ ಹೇಳಿದರೂ ಸಮುದಾಯದ ಕುಟುಂಬಗಳು ತಮ್ಮ ಮನೆಯ ಹೆಣ್ಣು ಮಕ್ಕಳನ್ನು ಅರೆಬೆತ್ತಲೆ ಮಾಡಿ ಬೇವಿನ ಸೊಪ್ಪಿನಿಂದ ಮೈಮುಚ್ಚಿ ದೇವರಿಗೆ ಹರಕೆ ತೀರಿಸುವುದನ್ನು ಬಿಟ್ಟಿಲ್ಲ. ಬಿಡುವ ಲಕ್ಷಣಗಳೂ ಇಲ್ಲ.
ಇಂತಹ ವಿಲಕ್ಷಣ ಸಂಪ್ರದಾಯವನ್ನು ಸವದತ್ತಿ, ಗುಲ್ಬರ್ಗಾ, ಬೀದರ್, ಬಿಜಾಪುರ ಮತ್ತಿತರೆ ಪ್ರದೇಶಗಳಲ್ಲಿ ಆಚರಿಸಲಾಗುತ್ತಿದೆ.
ರಾಜ್ಯದಲ್ಲಿ ಸುಮಾರು 25 ಲಕ್ಷ ಜನಸಂಖ್ಯೆ ಇದ್ದರೂ ರಾಜಕೀಯವಾಗಿ ತನ್ನ ಪ್ರಾಬಲ್ಯ ಮೆರೆಯಲು ಸಾಧ್ಯವಾಗಿಲ್ಲ. ಮನೋರಮಾ ಮಧ್ವರಾಜ್, ಬಾಬುರಾವ್ ಚಿಂಚನ್ಸೂರ್್ರಂತಹ ಬೆರಳೆಣಿಕೆಯಷ್ಟು ಜನರು ರಾಜಕೀಯದಲ್ಲಿ ತೊಡಗಿದ್ದಾರಾದರೂ ಸಮುದಾಯಕ್ಕೆ ಹೇಳಿಕೊಳ್ಳುವಂತಹ ರಾಜಕೀಯ ಬೆಂಬಲ ಇಲ್ಲ.
ಆರ್ಥಿಕ, ಶೈಕ್ಷಣಿಕ ಮತ್ತು ಸಾಮಾಜಿಕವಾಗಿ ತೀರಾ ಹಿಂದುಳಿದಿರುವ ಈ ಸಮುದಾಯವನ್ನು ಇತರೆ ಹಿಂದುಳಿದ ವರ್ಗಕ್ಕೆ ಸೇರಿಸಲಾಗಿದೆ. ಆದರೆ, ಈ ವರ್ಗದಲ್ಲಿ ಹೆಚ್ಚು ಜಾತಿಗಳು ಇರುವುದರಿಂದ ಅವುಗಳೊಂದಿಗೆ ಮೀಸಲಾತಿಗೆ ಹೋರಾಟ ನಡೆಸಬೇಕಾದ ಪರಿಸ್ಥಿತಿ ಇದೆ. ಇದನ್ನು ಮನಗಂಡ ಸರ್ಕಾರ 1996 ರಲ್ಲಿ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ನಿರ್ಧಾರಕ್ಕೆ ಬಂದಿತ್ತು. ಆದರೆ, ಸಮುದಾಯಗಳಲ್ಲಿರುವ ಉಪಜಾತಿಗಳ ಬಗ್ಗೆ ಕೇಂದ್ರ ಸರ್ಕಾರ ಸೃಷ್ಟಿಸಿರುವ ಗೊಂದಲಗಳಿಂದಾಗಿ ಈ ಬಗ್ಗೆ ಇನ್ನೂ ಅಂತಿಮ ನಿರ್ಧಾರಕ್ಕೆ ಬರಲು ಸಾಧ್ಯವಾಗಿಲ್ಲ.
ಮೊಗವೀರರಲ್ಲಿ ಸಾಕಷ್ಟು ಕುಟುಂಬಗಳು ಇನ್ನೂ ಸಾಮಾಜಿಕವಾಗಿ ಅಭಿವೃದ್ಧಿ ಕಾಣಲು ಸಾಧ್ಯವಾಗಿಲ್ಲ. ಸರ್ಕಾರಗಳು ಇಂತಹ ವರ್ಗಗಳ ಕಟ್ಟಕಡೆಯ ವ್ಯಕ್ತಿಗೂ ತಲುಪುವಂತಹ ಯೋಜನೆಗಳನ್ನು ರೂಪಿಸುವುದು ಅತ್ಯಗತ್ಯವಾಗಿದೆ - ಲಕ್ಷ್ಮಣ್ ಬಿ. ಕಾಂಚನ್, ಮೊಗವೀರ ಸಂಘದ ಮಾಜಿ ಅಧ್ಯಕ್ಷ.
ಹರಿಜನರಂತೆಯೇ ಕಡುಕಷ್ಟದ ಜೀವನ ಸಾಗಿಸುತ್ತಾ ಸಮಾಜದಲ್ಲಿ ತೀರಾ ಹಿಂದುಳಿದಿರುವ ಗಂಗಾಮತಸ್ಥ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಿದರೆ ಸ್ವಲ್ಪ ಮಟ್ಟಿನ ಮೀಸಲಾತಿ ದೊರಕಿ ಶೈಕ್ಷಣಿಕ ಮತ್ತು ಸಾಮಾಜಿಕವಾಗಿ ಅಭಿವೃದ್ಧಿ ಕಾಣಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಸರ್ಕಾರ ಪ್ರಾಮಾಣಿಕ ಪ್ರಯತ್ನ ನಡೆಸಬೇಕಿದೆ - ಎಚ್. ದೇವೇಂದ್ರಪ್ಪ, ಗಂಗಾಮತಸ್ಥ ಸಮುದಾಯದ ಮುಖಂಡ.

No comments:

Post a Comment