Saturday 4 February 2012

ಕುಂಬಾರರೀಗ ಕುಲಕಸುಬು ನೆಚ್ಚಿಕೊಳ್ಳುವಂತಿಲ್ಲ

ಮನೆಯನ್ನು ಬೆಳಗುವ ದೀಪ, ಮಡಿಕೆ, ಗಡಿಗೆ, ಗುಡಾಣ... ಹೀಗೆ ಹತ್ತು ಹಲವಾರು ಬಗೆಯ ವಸ್ತುಗಳನ್ನು ನಾಗರಿಕತೆ ಬೆಳೆದ ದಿನದಿಂದಲೂ ತಯಾರಿಸುತ್ತಾ ಬಂದಿದ್ದಾರೆ.
ಹಸಿ ಮಣ್ಣಿನಲ್ಲೇ ಬೆರೆತು, ಹದ ಮಾಡಿ ಅದಕ್ಕೊಂದು ಮೂರ್ತರೂಪ ಕೊಡುತ್ತಾ ತಮ್ಮ ಜೀವನವನ್ನು ಹಸನುಗೊಳಿಸಲು ಹೋರಾಡುತ್ತಲೇ ಬಂದಿದ್ದಾರೆ. ಆದರೆ, ಹೋರಾಟಕ್ಕೆ ಇನ್ನೂ ಫುಲ್್ಸ್ಟಾಪ್ ಬಿದ್ದಿಲ್ಲ.
ಇಂತಹ ಹೋರಾಟ ನಡೆಸುತ್ತಿರುವುದು ಕುಂಬಾರ ಸಮುದಾಯ.
ಇವರ ಕುಲಕಸುಬು ಕುಂಬಾರಿಕೆ. ಅಂದರೆ, ಮಣ್ಣಿನಿಂದ ಪಾತ್ರೆಗಳನ್ನು ತಯಾರಿಸುವ ಕಾಯಕ. ಬ್ರಿಟಿಷರ ಕಾಲದವರೆಗೆ ಕೈತುಂಬಾ ಕೆಲಸ, ಕುಟುಂಬ ಸದಸ್ಯರ ಹೊಟ್ಟೆ ತುಂಬುವಷ್ಟು ಊಟ ಸಿಗುತ್ತಿತ್ತು. ತದ ನಂತರ ಆಧುನಿಕತೆ ಬೆಳೆದಂತೆಲ್ಲಾ ಮಣ್ಣಿನ ಮಡಿಕೆ ತಯಾರಿಸುವ ಈ ವೃತ್ತಿ ನೇಪಥ್ಯಕ್ಕೆ ಸರಿಯುತ್ತಾ ಬಂದಿದೆ.
ಮಡಿಕೆ ಇದ್ದ ಜಾಗದಲ್ಲಿ ಸ್ಟೀಲ್ ಪಾತ್ರೆಗಳು ಬಂದಿವೆ. ಮಣ್ಣಿನ ದೀಪಗಳ ಸಾಲನ್ನು ಗಾಜಿನ ದೀಪಗಳು ಆವರಿಸಿಕೊಂಡಿವೆ. ಗುಡಾಣ(ರೈತರು ಬೆಳೆದ ಉತ್ಪನ್ನಗಳನ್ನು ವರ್ಷಗಟ್ಟಲೇ ಶೇಖರಿಸಿಡುವ ದೊಡ್ಡದಾದ ಮಣ್ಣಿನ ಪಾತ್ರೆ)ಗಳನ್ನು ಪ್ಲಾಸ್ಟಿಕ್, ಫೈಬರ್್ನ ಡ್ರಮ್್ಗಳು ಇನ್ನಿಲ್ಲದಂತೆ ಮಾಡಿವೆ.
ಹೀಗೆ ಪಾತ್ರೆಗಳನ್ನು ತಯಾರಿಸುವ ಕೈಗಾರಿಕೆಗಳು ಕುಂಬಾರನ ಕೈಗೆ ಕೆಲಸ ಇಲ್ಲದಂತೆ ಮಾಡಿವೆ.
ರಾಜ್ಯದಲ್ಲಿ ಈ ಕುಂಬಾರ ಸಮುದಾಯಕ್ಕೆ ಸೇರಿದವರನ್ನು ಒಂದೊಂದು ಭಾಗದಲ್ಲಿ ಒಂದೊಂದು ರೀತಿಯಲ್ಲಿ ಕರೆಯಲಾಗುತ್ತದೆ. ದಕ್ಷಿಣ ಕನ್ನಡ, ಉಡುಪಿ ಭಾಗದಲ್ಲಿ ಕುಲಾಲ, ಮೂಲ್ಯ ಎಂದು ಕರೆದರೆ, ಉತ್ತರ ಕನ್ನಡದಲ್ಲಿ ಗುನಗ ಎಂಬ ಹೆಸರಿನಲ್ಲಿ ಕರೆಯಲಾಗುತ್ತದೆ.
ತುಮಕೂರಿನಲ್ಲಿ ಶೆಟ್ಟಿ, ಉತ್ತರ ಕರ್ನಾಟಕದಲ್ಲಿ ವೀರಶೈವ ಕುಂಬಾರ, ಹಳೇ ಮೈಸೂರು ಭಾಗದಲ್ಲಿ ಕುಂಬಾರ ಎನ್ನಲಾಗುತ್ತಿದೆ. ಇವರೆಲ್ಲರ ಮಾತೃಭಾಷೆ ಕನ್ನಡ. ಅದೇ ರೀತಿ ತೆಲುಗು ಕುಂಬಾರರು, ತಮಿಳು ಕುಂಬಾರರು ಎಂದು ಅವರಾಡುವ ಭಾಷೆಯ ಆಧಾರದಲ್ಲಿ ಹೆಸರಿಸಲಾಗಿದೆ.
ಹೀಗೆ ರಾಜ್ಯದಲ್ಲಿ ಕುಂಬಾರ ಸಮುದಾಯದ 14 ಕ್ಕೂ ಹೆಚ್ಚು ಉಪಜಾತಿಗಳಿವೆ.
ಈ ಸಮುದಾಯ ಪ್ರಮುಖವಾಗಿ ಎರಡು ದೈವಗಳನ್ನು ಆರಾಧಿಸುತ್ತದೆ. ಉತ್ತರ ಕರ್ನಾಟಕದಲ್ಲಿ ಇರುವ ವೀರಶೈವ ಕುಂಬಾರರು ಶಿವನನ್ನು ಪೂಜಿಸುತ್ತಾರೆ. ದಕ್ಷಿಣ ಕನ್ನಡ ಮತ್ತು ಸುತ್ತಮುತ್ತಲಿನ ಭಾಗದವರಿಗೆ ವಿಷ್ಣು ಆರಾಧ್ಯದೈವ. ಆದರೆ, ಹಳೆಯ ಮೈಸೂರು ಭಾಗದಲ್ಲಿ ವಿಷ್ಣು ಮತ್ತು ಶಿವನನ್ನೂ ಆರಾಧಿಸುತ್ತಾರೆ. ಮತ್ತೆ ಕೆಲವರು ಶಾಲಿವಾಹನನನ್ನು  ಭಕ್ತರಾಗಿದ್ದಾರೆ.
ಸಮುದಾಯಕ್ಕೆ ವಿಶಿಷ್ಟವಾದ ಜೀವನ ಶೈಲಿ ಇಲ್ಲದಿದ್ದರೂ ಮಹಿಳೆಯರ ಆಚಾರ-ವಿಚಾರ ಸ್ವಲ್ಪ ಭಿನ್ನ. ಒಂದು ಪಂಗಡದ ಮಹಿಳೆಯರು ಮೂಗುತಿ ಹಾಕುವುದಿಲ್ಲ. ಮತ್ತೊಂದು ಸಮುದಾಯದವರು ಧರಿಸುತ್ತಾರೆ. ಈ ಎರಡೂ ಸಮುದಾಯಗಳಿಗೂ ಪರಸ್ಪರ ಸಂಬಂಧ ಬೆಳೆಸುತ್ತಿರಲಿಲ್ಲ. ಆದರೆ, ಇತ್ತೀಚಿನ ದಿನಗಳಲ್ಲಿ ಸಂಬಂಧಗಳು ಕೂಡಿಬರುತ್ತಿವೆ.
ಶ್ರೀಕೃಷ್ಣದೇವರಾಯನ ಕಾಲದಲ್ಲಿ ಪುರುಷನೊಬ್ಬ ತನ್ನ ಕುಟುಂಬದ ಸದಸ್ಯೆಗೆ ಮೂಗುತಿ ತರಲು ಮಾರುಕಟ್ಟೆಗೆ ಹೋದವನು ಮನೆಗೆ ವಾಪಾಸ್ ಬರಲೇ ಇಲ್ಲವಂತೆ. ಅಂದಿನಿಂದ ಇಂದಿನವರೆಗೆ ಈ ಸಮುದಾಯದ ಮಹಿಳೆಯರಿಗೆ ಮೂಗುತಿ ದೂರ. ತುಮಕೂರು ಭಾಗದಲ್ಲಿ ಈ ಸಮುದಾಯಕ್ಕೆ ಸೇರಿದ ಹಲವಾರು ಕುಟುಂಬಗಳಿವೆ.
ಇತರೆ ಮುಂದುವರೆದ ಜನಾಂದಗ ರೀತಿಯಲ್ಲಿ ಕುಂಬಾರ ಕುಟುಂಬಗಳು ಗುಂಪು ಗುಂಪಾಗಿ ವಾಸಿಸುತ್ತಿಲ್ಲ. ಊರಿಗೊಂದು ಕುಲಕಸುಬಿನ ಕುಟುಂಬ ಎಂಬ ರೀತಿಯಲ್ಲಿ ಒಂದು ಗ್ರಾಮಕ್ಕೆ ಒಂದು ಅಥವಾ ಎರಡು ಕುಟುಂಬಗಳು ಜೀವಿಸುತ್ತಿವೆ.
ಇವರ ಸಾಮಾಜಿಕ ಸ್ಥಿತಿಗತಿ ಅಷ್ಟಕಷ್ಟೆ. ತೀರಾ ಹಿಂದುಳಿದ ವರ್ಗಕ್ಕೆ ಸೇರಿರುವ ಸಮುದಾಯ ನಂಬಿಕೊಂಡದ್ದು ಕುಂಬಾರಿಕೆ ವೃತ್ತಿಯನ್ನು. ಆದರೆ, ದಿನ ಕಳೆದಂತೆ ವೃತ್ತಿ ಕಣ್ಮರೆಯಾಗುತ್ತಾ ಬಂದಿರುವುದರಿಂದ ಕೃಷಿ ಅಥವಾ ಕೂಲಿ ಮಾಡಿ ಹೊಟ್ಟೆ ಹೊರೆಯುವಂತಹ ಸ್ಥಿತಿ ಬಂದೊದಗಿದೆ. ರಾಜ್ಯದಲ್ಲಿ ಸುಮಾರು 16 ಲಕ್ಷ ಜನಸಂಖ್ಯೆ ಇರುವ ಈ ಸಮುದಾಯದ ಕೇವಲ 75 ಸಾವಿರದಿಂದ 1 ಲಕ್ಷದಷ್ಟು ಜನ ಮಾತ್ರ ವೃತ್ತಿಯನ್ನು ಮುಂದುವರೆಸಿದ್ದಾರೆ.
ಆಧುನಿಕತೆಯ ಭರಾಟೆ ಮಧ್ಯೆ ತಮ್ಮ ವೃತ್ತಿಯನ್ನು ಕೈಬಿಟ್ಟು ನಗರ ಪ್ರದೇಶಗಳಿಗೆ ಉದ್ಯೋಗ ಅರಸಿ ವಲಸೆ ಹೋದವರೇ ಹೆಚ್ಚು. ಇವರಲ್ಲಿ ಸ್ವಲ್ಪ ಸ್ಥಿತಿವಂತರು ತಮ್ಮ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಕೊಡಿಸಿ ಅವರು ಕೈತುಂಬಾ ಸಂಬಳ ಬರುವಂತಹ ಉದ್ಯೋಗ ಗಿಟ್ಟಿಸುವಂತಾಗಿದೆ. ಉಳಿದಂತೆ ಬಹುತೇಕ ಕುಟುಂಬಗಳು ವಸ್ತುಶಃ ಬೀದಿಗೆ ಬಂದಿದ್ದು, ನಗರ ಪ್ರದೇಶಗಳಲ್ಲಿ ಸಿಕ್ಕಷ್ಟು ಕೂಲಿಗೆ ಅಥವಾ ವೇತನಕ್ಕೆ ದುಡಿಯುತ್ತಿದ್ದಾರೆ.
ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿ ಉತ್ತಮವಾಗಿದ್ದರೆ ಸಮುದಾಯದ ಕೆಲವರಾದರೂ ರಾಜಕೀಯವಾಗಿ ಮುಂದೆ ಬರಲು ಸಾಧ್ಯವಾಗುತ್ತಿತ್ತು. ಆದರೆ, ಈ ಮೂರೂ ಕ್ಷೇತ್ರಗಳಲ್ಲಿ ಹಿಂದೆ ಬಿದ್ದಿರುವ ಸಮುದಾಯದಿಂದ ರಾಜಕೀಯ ಪ್ರಭಾವ ಬೀರುವಂತಹ ಯಾವೊಬ್ಬ ಮುಖಂಡರೂ ಹುಟ್ಟಿಕೊಳ್ಳಲು ಸಾಧ್ಯವಾಗಿಲ್ಲ.
ಆದರೆ, ಇಡೀ ಸಮುದಾಯಕ್ಕೊಬ್ಬರೇ ರಾಜಕಾರಣಿ ಇದ್ದರು. ಅವರೆಂದರೆ, ಡಾ.ಲಕ್ಷ್ಮೀಸಾಗರ್. ಸಂಸತ್ಸದಸ್ಯರಾಗಿ, ಶಾಸಕರಾಗಿ ಕಾನೂನು ಸಚಿವರಾಗಿದ್ದರು. ಇವರನ್ನು ಹೊರತುಪಡಿಸಿ ರಾಜಕೀಯ ಪ್ರಾಶಸ್ತ್ಯ ಸಮುದಾಯಕ್ಕೆ ಸಿಕ್ಕಿಲ್ಲ.
ಕುಂಬಾರ ಸಮುದಾಯವನ್ನು ಮೀಸಲಾತಿ ವಿಚಾರದಲ್ಲಿ ಎರಡು ವಿಧದಲ್ಲಿ ವಿಂಗಡಿಸಲಾಗಿದೆ. ಉತ್ತರ ಕರ್ನಾಟಕ ಭಾಗದ ಕುಂಬಾರರನ್ನು ಪ್ರವರ್ಗ 3 ಬಿಯಲ್ಲಿ ಸೇರಿಸಿದ್ದರೆ, ಉಳಿದ ಪ್ರದೇಶಗಳ ಕುಂಬಾರರನ್ನು 2 ಎ ಗೆ ಸೇರ್ಪಡೆ ಮಾಡಲಾಗಿದೆ. ಆದರೆ, 2 ಎ ನಲ್ಲಿ 18 ಜಾತಿಗಳು ಬರುವ ಹಿನ್ನೆಲೆಯಲ್ಲಿ ಈ ಸಮುದಾಯಕ್ಕೆ ಹೆಚ್ಚಿನ ಮೀಸಲಾತಿ ಸಿಗುತ್ತಿಲ್ಲ ಎಂಬ ಕೊರಗು ಇದೆ.
ಕುಂಬಾರಿಕೆ ಎನ್ನುವುದು ಈಗ ಕೇವಲ ಕುಂಬಾರ ಸಮುದಾಯಕ್ಕೆ ಸೀಮಿತವಾಗಿಲ್ಲ. ಕಲೆ ಗೊತ್ತಿರುವ ಇತರೆ ಸಮುದಾಯದವರೂ ಮಡಿಕೆ, ದೀಪ ತಯಾರಿಕೆಯನ್ನು ಬಿಟ್ಟು ವ್ಯಾಪಾರ ದೃಷ್ಟಿಯಿಂದ ಅಲಂಕಾರಿಕಾ ವಸ್ತುಗಳನ್ನು ತಯಾರಿಸುವುದನ್ನು ಕರಗತ ಮಾಡಿಕೊಂಡಿದ್ದಾರೆ.
ಹೀಗಾಗಿ ಸಾಂಪ್ರದಾಯಿಕ ಮಡಿಕೆಗಳಿಗೆ ಬೇಡಿಕೆ ಇಲ್ಲದಂತಾಗಿದೆ. ಇದರ ಜತೆಗೆ ಮಡಿಕೆ ತಯಾರಿಸಲು ಅಗತ್ಯವಾದ ಜೇಡಿಮಣ್ಣು ಮತ್ತು ಕೆಂಪುಮಣ್ಣಿನ ಕೊರತೆ ಎದುರಾಗಿರುವುದೂ ಕುಂಬಾರರು ತಮ್ಮ ಕುಲಕಸುಬು ಕೈಬಿಡಲು ಕಾರಣವಾಗಿದೆ.
ಸಮುದಾಯದಲ್ಲಿ ಇರುವ ಅಲ್ಪ ಜನಸಂಖ್ಯೆಗೆ ನಾಲ್ಕೈದು ಸಂಘಟನೆಗಳು ಇವೆ. ಸಮುದಾಯದ ಏಳ್ಗೆಗಾಗಿ ಹುಟ್ಟಿಕೊಂಡಿದ್ದರೂ ಇವು ಪರಸ್ಪರ ಪೈಪೋಟಿಗೆ ಇಳಿದಿರುವುದು ಸಮುದಾಯದ ಹಿನ್ನಡೆಗೆ ಪ್ರಮುಖ ಕಾರಣವೂ ಆಗಿದೆ.
ರಾಜಕೀಯ ಪ್ರಾತಿನಿಧ್ಯ ಅಥವಾ ಈ ಕ್ಷೇತ್ರದಲ್ಲಿ ನಮ್ಮ ನಾಯಕರಿಲ್ಲದೇ ಸಮುದಾಯ ಬಹಳ ವರ್ಷಗಳಿಂದಲೂ ತುಳಿತಕ್ಕೆ ಒಳಗಾಗುತ್ತಲೇ ಬಂದಿದೆ. ಇದ್ದ ವೃತ್ತಿಯನ್ನೂ ಬಿಡುವಂತಾಗಿರುವ ಸಮುದಾಯದ ಲಕ್ಷಾಂತರ ಕುಟುಂಬಗಳಿಗೆ ಸೂಕ್ತ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಮತ್ತು ರಾಜಕೀಯ ಪ್ರಾತಿನಿಧ್ಯ ನೀಡುವತ್ತ ಸರ್ಕಾರಗಳು ಗಮನಹರಿಸಬೇಕು - ಡಿ. ಚಂದಪ್ಪ ಮೂಲ್ಯ, ರಾಜ್ಯ ಕುಂಬಾರ ಸಮಾಜದ ಅಧ್ಯಕ್ಷ.
18 ಜಾತಿಗಳಿರುವ ಪ್ರವರ್ಗ 2 ಎ ನಲ್ಲಿ ಶೇ. 15 ರಷ್ಟು ಮೀಸಲಾತಿ ನೀಡಲಾಗಿದೆ. ಆದರೆ, ಈ ಮೀಸಲಾತಿ ಅನುಪಾತ ಎಲ್ಲಾ ಜಾತಿಗಳಿಗೆ ಹಂಚಿಹೋಗುವುದರಿಂದ ಕುಂಬಾರರಿಗೆ ಸೂಕ್ತ ಮೀಸಲಾತಿ ಸಿಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಸಮುದಾಯಕ್ಕೆ ಕನಿಷ್ಟ ಶೇ. 4 ರಷ್ಟು ಒಳಮೀಸಲಾತಿ ನೀಡಬೇಕು -ನಟರಾಜ್, ಕುಂಬಾರರ ಮಹಾಸಂಘದ ಖಜಾಂಚಿ.

No comments:

Post a Comment