Saturday 4 February 2012

ಕಾಡುಗೊಲ್ಲರ ಬಗ್ಗೆ ಬೇಕಿದೆ ನಾಡಿನ ಕಾಳಜಿ

ಮಗು ಹೆತ್ತರೆ, ಸತ್ತರೆ ಎಲ್ಲರಿಗೂ ಸೂತಕ. ಆದರೆ, ಇವರಿಗೆ ಮದುವೆಯೂ ಸೂತಕ!
ಮಹಿಳೆ ಮಗುವನ್ನು ಹೆತ್ತರೆ ತಾಯಿ ಸಂತಸಪಡುವ ಬದಲು ಮಗುವಿನ ಜತೆಗೆ 21 ದಿನಗಳ ಕಾಲ ಊರ ಹೊರಗೆ ಏಕಾಂತ ಜೀವನ ಸಾಗಿಸಬೇಕು. ಅದೇ ರೀತಿ ಹೆಣ್ಣು ಮಕ್ಕಳು ಋತುಮತಿಯಾದರೆ 9 ದಿನಗಳ ಕಾಲ ಮಳೆಯಿರಲಿ, ಚಳಿಯಿರಲಿ, ಬಿಸಿಲಿರಲಿ ಸಣ್ಣ ಗುಡಿಸಿಲಿನಲ್ಲಿ 9 ದಿನಗಳ ಕಾಲ ಸಂಬಂಧಿಕರಿಂದ ದೂರ ಇರಬೇಕು.
ಊರಿನ ಪೂಜಾರಿಗಳು ಸೂತಕ ತೆಗೆಯುವ ಪೂಜೆ ಪುನಸ್ಕಾರಗಳನ್ನು ನೆರವೇರಿಸಿದ ನಂತರವಷ್ಟೇ ಈ ಮಹಿಳೆಯರು ಊರಿನೊಳಗೆ ಪ್ರವೇಶಿಸಬೇಕು. ಒಂದು ವೇಳೆ ಮನೆಯೊಳಗೇ ಮಗು ಜನಿಸಿದರೆ ಅದರ ಹೊಕ್ಕುಳ ಬಳ್ಳಿಯನ್ನು ಕತ್ತರಿಸುವುದಿಲ್ಲ. ಬದಲಿಗೆ ತರಾತುರಿಯಲ್ಲಿ ಊರ ಹೊರಗಿನ ನಿಗದಿತ ಪ್ರದೇಶದಲ್ಲಿ ಗುಡಿಸಲು ನಿರ್ಮಿಸಿ(ಗ್ರಾಮ್ಯ ಭಾಷೆಯಲ್ಲಿ ಗುಡ್ಲು ಎನ್ನಲಾಗುತ್ತದೆ) ಮಗು ಮತ್ತು ತಾಯಿ ಸಮೇತ ಅಲ್ಲಿಗೆ ಕರೆದೊಯ್ಯುತ್ತಾರೆ. ನಂತರ ಅಲ್ಲಿ ಬಳ್ಳಿಯನ್ನು ಕತ್ತರಿಸಲಾಗುತ್ತದೆ.
ಇನ್ನು ಮಹಿಳೆ ತಿಂಗಳಿಗೊಮ್ಮೆ ಮುಟ್ಟಾದರೆ ಅವರೂ ಮೂರುದಿನಗಳ ಕಾಲ ಊರ ಹೊರಗೆ ಇರಬೇಕು. ಈ ಸಂದರ್ಭದಲ್ಲಿ ಅವರು ಯಾವುದೇ ದೇವಾಲಯಗಳಿಗಾಗಲೀ ಅಥವಾ ಶುಭ ಸಮಾರಂಭಗಳಿಗಾಗಲೀ ಹೋಗುವುದು ನಿಷಿದ್ಧ.
ಇಂತಹ ಸಂಪ್ರದಾಯ ಇಲ್ಲಿಗೇ ಮುಗಿಯುವುದಿಲ್ಲ. ಮದುವೆಯೆಂದರೆ ಎಲ್ಲರ ಮನೆಯಲ್ಲಿ ಸಂತಸ, ಸಡಗರ ಇರುತ್ತದೆ. ಮಧುಮಗ ಮತ್ತು ಮಧುಮಗಳಿಗೆ ಗೃಹಸ್ಥಾಶ್ರಮಕ್ಕೆ ಹೋಗುವ ಆತುರತೆ ಇರುತ್ತದೆ. ಆದರೆ, ಈ ಸಮುದಾಯದಲ್ಲಿ ಇರುವ ಪದ್ಧತಿಯೇ ಬೇರೆ. ಊರ ಹೊರಗೆ ಇಡೀ ದಿನ ಕಾಲ ಕಳೆದ ನಂತರ ರಾತ್ರಿಯ ವೇಳೆಗೆ ಸೂತಕ ತೆಗೆದ ನಂತರವಷ್ಟೇ ಅವರು ಮನೆಯೊಳಗೆ ಹೋಗಬೇಕು.
ಇದನ್ನು ನಂಬಿಕೆ ಎಂದಾದರೂ ಭಾವಿಸಿ, ಮೂಢನಂಬಿಕೆ ಎಂದಾದರೂ ಭಾವಿಸಿ. ಇಂತಹ ಸಂಪ್ರದಾಯವನ್ನು ತಲೆತಲಾಂತರದಿಂದ ರೂಢಿಸಿಕೊಂಡು ಬಂದಿರುವ ಸಮುದಾಯವೇ ಕಾಡುಗೊಲ್ಲ.
ಅರಣ್ಯ ಪ್ರದೇಶದಲ್ಲಿ ದನಕರು ಮತ್ತು ಕುರಿ ಸಾಕಾಣಿಕೆಯನ್ನು ಮಾಡುತ್ತಾ ಬಂದಿದ್ದರಿಂದ ಇವರಿಗೆ ಕಾಡುಗೊಲ್ಲರು ಎಂದು ಕರೆಯಲಾಗುತ್ತಿದೆ. ಆದರೆ, ದಿನ ಕಳೆದಂತೆ ಅರಣ್ಯ ವಾಸ ಸ್ಥಾನದಿಂದ ಹೊರಬಂದ ಈ ಸಮುದಾಯ ಜನವಸತಿ ಪ್ರದೇಶದ ಸನಿಹಕ್ಕೆ ಬಂದು ಸೇರಿತು. ಆದರೂ ಈ ಜನವಸತಿ ಪ್ರದೇಶದೊಟ್ಟಿಗೆ ಬೆರೆಯಲಿಲ್ಲ. ಅಂದರೆ, ಗ್ರಾಮದ ಹೊರಗೆ ಹತ್ತಾರು ಮನೆಗಳು ಅಥವಾ ಗುಡಿಸಲು ನಿರ್ಮಿಸಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಇದಕ್ಕೆ 'ಹಟ್ಟಿ' ಅಥವಾ ಗೊಲ್ಲರ ಹಟ್ಟಿ ಎಂದು ಕರೆಯಲಾಗುತ್ತದೆ.
ಈ ಹಟ್ಟಿಯ ಸುತ್ತ ಕಳ್ಳಿ ಬೇಲಿ ಹಾಕುವುದು ಸಮುದಾಯದ ವಿಶೇಷ.
ಇವರ ಮೂಲ ದೆಹಲಿ ಎಂದು ವಾದಿಸುವವರೂ ಇದ್ದಾರೆ. ಮುಸಲ್ಮಾನ ದೊರೆಗಳ ಕಾಟ ತಡೆಯಲಾರದೇ ಈ ಸಮುದಾಯ ದೆಹಲಿಯಿಂದ ಕರ್ನಾಟಕ ಸೇರಿದಂತೆ ಮತ್ತಿತರೆ ರಾಜ್ಯಗಳಿಗೆ ವಲಸೆ ಬಂದಿದ್ದಾರೆಂಬ ಪ್ರತೀತಿಯೂ ಇದೆ. ಆದರೆ, ಇದಕ್ಕೆ ಪೂರಕವಾದ ಸಾಕ್ಷ್ಯಾಧಾರಗಳಿಲ್ಲ ಎನ್ನುತ್ತಾರೆ ಇತಿಹಾಸ ತಜ್ಞರು. ಏಕೆಂದರೆ, ಮುಸಲ್ಮಾನರ ಆಳ್ವಿಕೆ ಬರುವ ಮೊದಲೇ ಕಾಡುಗೊಲ್ಲರು ಕರ್ನಾಟಕದ ಅರಣ್ಯ ಪ್ರದೇಶಗಳಲ್ಲಿ ವಾಸಿಸುತ್ತಿದ್ದರು ಎಂಬುದಕ್ಕೆ ಹಲವಾರು ನಿದರ್ಶನಗಳಿವೆ. ಹೀಗಾಗಿ ಇವರ ಮೂಲಸ್ಥಾನ ಕರ್ನಾಟಕವೇ ಎಂಬುದನ್ನು ಹಲವು ಶಾಸನಗಳು, ವಚನಗಳು ಹೇಳುತ್ತವೆ.
ರಾಜ್ಯದಲ್ಲಿ ಚಿತ್ರದುರ್ಗ, ತುಮಕೂರು ಜಿಲ್ಲೆಗಳಲ್ಲಿ ಹೆಚ್ಚಾಗಿ ಕಂಡುಬರುವ ಈ ಸಮುದಾಯದ ಜನ, ಕೂಡ್ಲಿಗಿ, ತರೀಕೆರೆ, ಕಡೂರು, ಜಗಳೂರು, ಕೋಲಾರ, ದಾವಣಗೆರೆ, ಬಳ್ಳಾರಿ, ಹಾವೇರಿ, ಬೆಂಗಳೂರು ಗ್ರಾಮಾಂತರ ಪ್ರದೇಶಗಳಲ್ಲೂ ಕಂಡುಬರುತ್ತಾರೆ.
ನಾವು ಹಿಂದೂಧರ್ಮದ ಸಂಪ್ರದಾಯಕ್ಕೆ ಸೇರಿದವರಲ್ಲ ಎಂದು ಹೇಳಿಕೊಳ್ಳುವ ಸಮುದಾಯ ಬುಡಕಟ್ಟು ಸಮುದಾಯದ ಒಂದು ಕೊಂಡಿ ಎಂದು ಹೇಳಿಕೊಳ್ಳುತ್ತದೆ. ಇವರಿಗೆ ರಾಮ, ಕೃಷ್ಣ, ವೆಂಕಟೇಶ್ವರ ಹೀಗೆ ವಿವಿಧ ಹೆಸರಿನ ದೇವರುಗಳಿಲ್ಲ. ಆದರೆ, ಇವರಿಗೆ ಸಾಂಸ್ಕೃತಿಕ ವೀರರೇ ದೇವರು. ಜುಂಜಪ್ಪ, ಯತ್ತಪ್ಪ, ಚಿತ್ರದೇವರು ಮತ್ತು ಕಾಟಿಂ ದೇವರುಗಳೇ ಆರಾಧ್ಯ ದೈವಗಳು.
ರಾಜ್ಯದಲ್ಲಿ ಈ ಕಾಡುಗೊಲ್ಲರು 5 ಲಕ್ಷಕ್ಕಿಂತ ಕಡಿಮೆ ಸಂಖ್ಯೆಯಲ್ಲಿದ್ದಾರೆ. ಆದರೂ ಉಪಜಾತಿಗಳೇನೂ ಕಮ್ಮಿಯಿಲ್ಲ. 79 ಉಪಜಾತಿಗಳಿದ್ದು, ಪ್ರಮುಖವಾಗಿ ಮೂರ್ಕಟ್ಟೆ, ಕಟ್ಟೆಮನೆ, ತಾಳವಟ್ಟಿ ಕಟ್ಟೆಮನೆ, ಸನ್ನರು, ಕೋಣರ್ ಗೊಲ್ಲರು, ದ್ಯಾವರು ಗೊಲ್ಲರು, ಕಂಬೇರು, ಅಜ್ಜೇರು, ಪೋಲಿನವರು, ಕರಡಿ ಗೊಲ್ಲರು, ಕರಿಯೋಬನಹಳ್ಳಿ, ಚಿತ್ತಗೊಲ್ಲರು ಎಂಬ ಉಪಜಾತಿಗಳಿವೆ.
ಇವರ ಉಡುಪು ವಿಶಿಷ್ಟವಾದುದು. ಕೈಯಲ್ಲೊಂದು ಕೋಲು, ಹೆಗಲ ಮೇಲೆ ಕಂಬಳಿ ಹಾಕಿ ದನ, ಕುರಿಗಳನ್ನು ಮೇಯಿಸಲು ಹೋಗುವ ಇವರ ವೇಷಭೂಷಣದ ಬಗ್ಗೆ ಶ್ರೀಪಾದರು(ಕ್ರಿ.ಶ. 1406) ಕವಿತೆ ಮೂಲಕ ಚಿತ್ರಿಸಿರುವ ಬಗೆ ಇಲ್ಲಿದೆ:-
ಕೋಲುಕೈಯಲಿ ಜೋಲುಗಂಬಳಿ
ಹೆಗಲಮೇಲೆ ಕಲ್ಲಿಚೀಲ ಕೊಂಕಳಲ್ಲಿ
ಕಾಲ ಕಡಗವನಿಟ್ಟು ಕಾಡೊಳಿಹ ಪಶುಹಿಂಡ
ಲಾಲಿಸುವ ಬಾಲಕರ ಮೊಳದೊಳಗಿದ್ದೆನ್ನ
ಕಲ್ಲುಮಣಿ ಕವಡೆಯನು ಕಾಡೊಳಿಹ ಗುಲಗಂಜಿ
ಸಲ್ಲದೊಡವೆಯ ನೀನು ಸರ್ವಾಂಗಕೆ
ಅಲ್ಲಲ್ಲೆಸೆಯೆ ಧರಿಸಿ ನವಿಲುಗರಿಗಳ ಗೊಂಡೆ
ಅಲ್ಲಿ ಗೊಲ್ಲರ ಕೂಡ ಚೆಲ್ಲಾಟವಾಡುತಲಿ...
ಅದೇ ರೀತಿ ಜಾನಪದಲ್ಲಿ ಗೊಲ್ಲರ ಉಡುಗೆ ತೊಡುಗೆಗಳನ್ನು ಹೀಗೆ ಬಿಂಬಿಸಲಾಗಿದೆ:-
ಬೆಟ್ಟದಟ್ಟಿಯ ಪಟ್ಟಿ ಚಲ್ಲಣ
ತೊಟ್ಟ ಪದಕವು ಬಿಲ್ಲೆ ಸರಗಳು
ಕಟ್ಟಿಬಾಪುರೆ ಭುಜದ ಕೀರ್ತಿಯ
ಇಟ್ಟಿ ಮುದ್ರಿಕೆಯುಂಗರ
ಪಚ್ಛೆ ಗಡಗವ ಪವಳಸರವನು
ಹಚ್ಚಿನಾ ಕಾಲ್ಗಡಗ ಗೆಜ್ಜೆಯ
ಪೆಚ್ಚುತನದಲ್ಲಿ ಧರಿಸಿ ಮೆರೆದನು...
ಅನಾದಿ ಕಾಲದಿಂದಲೂ ಸಮುದಾಯದ ಪುರುಷರು ನಿಕ್ಕರ್ ಧರಿಸಿ ಹೆಗಲ ಮೇಲೆ ಕಂಬಳಿ ಹಾಕುತ್ತಿದ್ದರು. ಇದನ್ನು ಹೊರತುಪಡಿಸಿ ಯಾವುದೇ ಬಟ್ಟೆ ತೊಡುತ್ತಿರಲಿಲ್ಲ. ಅದೇ ರೀತಿ ಮಹಿಳೆ ವಿವಾಹ ಆದ ನಂತರ ಕುಪ್ಪಸ ಹಾಕುತ್ತಿರಲಿಲ್ಲ. ಆದರೆ, ಸಾಮಾಜಿಕ ಪ್ರಜ್ಞೆ ಬಂದಂತೆಲ್ಲಾ ಇವರಲ್ಲಿ ಸ್ವಲ್ಪ ಮಟ್ಟಿನ ನಾಗರಿಕತೆ ಬರತೊಡಗಿದೆ. ಪರಿಣಾಮ ಪುರುಷರು ಅಂಗಿ, ಪ್ಯಾಂಟ್ ಸೇರಿದಂತೆ ಮೈ ಮುಚ್ಚುವಂತಹ ಬಟ್ಟೆ ಧರಿಸಿದರೆ, ಮಹಿಳೆಯರು ಕುಪ್ಪಸ, ಸೀರೆ ಉಡುತ್ತಿದ್ದಾರೆ. ಆದರೆ, ಕೂಡ್ಲಿಗಿ ಮತ್ತು ಮೊಳಕಾಲ್ಮೂರು ತಾಲೂಕುಗಳಲ್ಲಿರುವ ಕಾಡುಗೊಲ್ಲರ
ಮಹಿಳೆಯರು ಇಂದಿಗೂ ಕುಪ್ಪಸ ತೊಡುವುದಿಲ್ಲ.
ಸಮುದಾಯದ ಮತ್ತೊಂದು ವೈಚಿತ್ರ್ಯವೆಂದರೆ, ಗಂಡ ಸತ್ತಾಗ ಮಹಿಳೆಯರು ತಾಳಿ ತೆಗೆಯುವುದಿಲ್ಲ, ಹೂವು ಮುಡಿಯುವುದನ್ನು ಬಿಡುವುದಿಲ್ಲ. ಈ ಮಹಿಳೆಯರನ್ನು ಎಂದಿಗೂ ವಿಧವೆಯರೆಂದು ಭಾವಿಸುವುದಿಲ್ಲ. ಇವರು ಎಲ್ಲಾ ಶುಭ ಸಮಾರಂಭಗಳಲ್ಲಿ ಪಾಲ್ಗೊಳ್ಳಲು ಅವಕಾಶವಿದೆ.
ಇನ್ನು ಇವರ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸ್ಥಿತಿ ಇತರೆ ಸಮುದಾಯಕ್ಕಿಂತ ಕೆಳಮಟ್ಟದಲ್ಲಿದೆ. ಏಕೆಂದರೆ, ಸಮಾಜದ ಮುಖ್ಯವಾಹಿನಿಯಿಂದ ದೂರವಿರುವ ಸಮುದಾಯವನ್ನು ಸಮಾಜ ಓಲೈಸಿದ್ದಕ್ಕಿಂತ ಅಲಕ್ಷಿಸಿರುವುದೇ ಹೆಚ್ಚು. ಹೀಗಾಗಿ ಮುಖ್ಯವಾಹಿನಿಗೆ ಬರಲು ಸಮುದಾಯ ಹರಸಾಹಸಪಡುತ್ತಿದೆ.
ಪರಿಶಿಷ್ಟ ಪಂಗಡಕ್ಕಿಂತ ನಿಕೃಷ್ಠವಾಗಿರುವ ಸಮುದಾಯವನ್ನು ಇತರೆ ಹಿಂದುಳಿದ ವರ್ಗದಲ್ಲಿ ಮೊದಲ ವರ್ಗಕ್ಕೆ ಸೇರಿಸಲಾಗಿದೆ. ತಮ್ಮನ್ನೂ ಪರಿಶಿಷ್ಟ ವರ್ಗಕ್ಕೆ ಸೇರಿಸಿ ಅವರಂತೆಯೇ ಸರ್ಕಾರದ ಸೌಲಭ್ಯಗಳನ್ನು ನೀಡುವಂತೆ ಸಮುದಾಯದ ಬೆರಳೆಣಿಕೆಯಷ್ಟು ನಾಯಕರು ದಶಕಗಳಿಂದ ಹೋರಾಟ ನಡೆಸುತ್ತಲೇ ಬಂದಿದ್ದಾರೆ. ಆದರಿನ್ನೂ ಕಾರ್ಯರೂಪಕ್ಕೆ ಬಂದಿಲ್ಲ.
ರಾಜಕೀಯ ಕ್ಷೇತ್ರದಲ್ಲೂ ಸಮುದಾಯದ ಏಳ್ಗೆ ಅಷ್ಟಕಷ್ಟೆ. ಹೊಳಲ್ಕೆರೆಯ ಸಿದ್ರಾಮಪ್ಪ ಒಮ್ಮೆ ಮತ್ತು ಉಮಾಪತಿ ಅವರು ಎರಡು ಬಾರಿ ಶಾಸಕರಾಗಿದ್ದನ್ನು ಹೊರತುಪಡಿಸಿದರೆ ಇನ್ನಾವುದೇ ನಾಯಕರು ರಾಜಕೀಯ ಕ್ಷೇತ್ರದಲ್ಲಿ ಹೆಸರು ಮಾಡಿಲ್ಲ.
ನಮ್ಮ ಸಮುದಾಯವನ್ನು ಕಡೆಗಣಿಸಲಾಗಿದೆ. ನೂರಕ್ಕೆ 10 ಜನರೂ ವಿದ್ಯಾವಂತರಿಲ್ಲ. ಹೀಗಾಗಿ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಿ ಅದಕ್ಕೆ ಸಿಗುವ ಎಲ್ಲಾ ಸೌಲಭ್ಯಗಳು ದೊರೆಯುವಂತಾಗಬೇಕು. ಈ ಮೂಲಕ ನಮ್ಮನ್ನು ಸಮಾಜದ ಮುಖ್ಯವಾಹಿನಿಗೆ ತರಲು ಸರ್ಕಾರಗಳು ಪ್ರಾಮಾಣಿಕ ಪ್ರಯತ್ನ ನಡೆಸಬೇಕು- ವಿ. ನಾಗಪ್ಪ, ರಾಜ್ಯ ಕಾಡುಗೊಲ್ಲರ ಕ್ಷೇಮಾಭಿವೃದ್ಧಿ ಸಂಘ.

1 comment: