Saturday, 4 February 2012

ರಾಜರ ಪ್ರೀತಿಗೆ ಪಾತ್ರರಾಗಿದ್ದ ಈಡಿಗರು

ರಾಜ ಮಹಾರಾಜರಿಗೆ ಬೇಟೆ ಎಷ್ಟು ಪ್ರಿಯವಾಗಿತ್ತೋ ಅಷ್ಟೇ ಪ್ರೀತಿಗೆ ಪಾತ್ರವಾಗಿದ್ದ ಸಮುದಾಯವಿದು.
ಇವರು ನೀಡುತ್ತಿದ್ದ ತರೇಹಾವಾರಿ ಪೇಯಗಳನ್ನು ಕುಡಿದು ರಾಜರು ಸಂತುಷ್ಟರಾಗುತ್ತಿದ್ದರು. ಇದಕ್ಕಾಗಿ ಕೈತುಂಬಾ ಭಕ್ಷೀಸನ್ನೂ ನೀಡುತ್ತಿದ್ದರು.
ರಾಜರ ಕಾಲದಲ್ಲಿ ದಟ್ಟಡವಿಗಳ ಮಧ್ಯೆ ಸೇಂದಿ ಇಳಿಸುವ ಕಾಯಕದ ಜತೆಗೆ ಗೆಡ್ಡೆಗೆಣಸುಗಳನ್ನು ತೆಗೆದು ಮಾರಾಟ ಮಾಡುತ್ತಾ ಹೊಟ್ಟೆ ಹೊರೆಯುತ್ತಿದ್ದರು.
ಕಾಲಕ್ರಮೇಣ ಈ ಸಮುದಾಯಕ್ಕೆ ಸೇಂದಿ ತೆಗೆಯುವುದೇ ಕುಲಕಸುಬಾಗಿ ಹೋಯ್ತು. ತಲೆತಲಾಂತರದಿಂದ ಈ ಕುಲಕಸುಬನ್ನು ನಂಬಿಕೊಂಡು ಜೀವನ ಸಾಗಿಸುತ್ತಾ ಬಂದಿದ್ದ ಈ ಸಮುದಾಯದ ಹೆಸರು ಈಡಿಗ.
ಇವರು ಈಚಲು, ತೆಂಗು ಮತ್ತು ಭಗಿನಿಯಂತಹ ಮರಗಳಿಂದ ಇಳಿಸುತ್ತಿದ್ದ ಸೇಂದಿಯೇ ಕಡುಬಡವರ ಸ್ಕಾಚ್ ವಿಸ್ಕಿಯಾಗಿತ್ತು. ಪ್ರತಿದಿನ ಲಕ್ಷಾಂತರ ಲೀಟರ್ ಸೇಂದಿ ಇಳಿಸಿ ಅದನ್ನು ಮಾರಿ ಜೀವನ ಸಾಗಿಸುತ್ತಿದ್ದರು. ಈ ಸೇಂದಿ ಇಳಿಸುವ ಕಾಯಕ ಬಿಟ್ಟರೆ ಮತ್ತ್ಯಾವುದೇ ಉದ್ಯೋಗ ಇವರಿಗೆ ಗೊತ್ತಿರಲಿಲ್ಲ. ವ್ಯವಸಾಯ ಮಾಡುವ ಬಗ್ಗೆ ಚಿಂತಿಸುತ್ತಿದ್ದರಾದರೂ ಇವರಿಗೆ ಬೊಗಸೆಯಷ್ಟೂ ಜಮೀನಿರಲಿಲ್ಲ.
ರಾಜ ಮಹಾರಾಜರ ನಂತರ ಕಾಲ ಕ್ರಮೇಣ ಹಲವಾರು ಕಾಯ್ದೆಗಳು ಬಂದು ಇವರಿಗೆ ತೊಡಕಾಗಿ ಪರಿಣಮಿಸಿದವು. ಕಾಡಿನಲ್ಲಿ ವಾಸ ಮಾಡಲು ಹಲವು ನಿಬಂಧನೆಗಳು ಜಾರಿಯಾದವು. ಪರಿಣಾಮ ಈ ಸಮುದಾಯ ನಗರ ಮತ್ತು ಜನವಸತಿ ಪ್ರದೇಶಗಳಿಗೆ ವಲಸೆ ಬರಲೇಬೇಕಾಯಿತು.
ಹೀಗೆ ವಲಸೆ ಬಂದರೂ ತಮ್ಮ ವೃತ್ತಿಯನ್ನು ಮಾತ್ರ ಬಿಡಲಿಲ್ಲ. ಸರ್ಕಾರಗಳೇ ಅಧಿಕೃತವಾಗಿ ಸೇಂದಿ ಇಳಿಸುವ ಇವರ ಕಾಯಕಕ್ಕೆ ನೆರವಾಗಿದ್ದವು.
1990 ರ ದಶಕದವರೆಗೆ ಕೈಗೊಂದಿಷ್ಟು ಕೆಲಸ ಅಂದರೆ ಸೇಂದಿ ಇಳಿಸುವುದು ಮತ್ತು ಅದರಿಂದ ಬಂದ ಹಣದಿಂದ ಎರಡೊತ್ತಿನ ಆಹಾರ ಗಿಟ್ಟಿಸುತ್ತಿದ್ದರು. ಆದರೆ, 1992-93 ರ ವೇಳೆಗೆ ರಾಜ್ಯ ಸರ್ಕಾರ ಸೇಂದಿ ಇಳಿಸುವುದನ್ನು ನಿಷೇಧಿಸಿತು. ಮೊದಲೇ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಮತ್ತು ಸಾಂಸ್ಕೃತಿಕವಾಗಿ ಹಿಂದುಳಿದಿದ್ದ ಈ ಸಮುದಾಯಕ್ಕೆ ನಿಷೇಧವೆಂಬುದು ಬರಸಿಡಿಲಿನಂತೆ ಬಡಿಯಿತು.
ಅಷ್ಟರ ವೇಳೆಗಾಗಲೇ ಸಮುದಾಯದ ಬೆರಳೆಣಿಕೆಯಷ್ಟು ಮಂದಿ ಶೈಕ್ಷಣಿಕ ಮತ್ತು ಆರ್ಥಿಕವಾಗಿ ಮುಂದುವರೆದಿದ್ದರು. ಹೀಗಾಗಿ ಸೇಂದಿ ಇಳಿಸುವುದನ್ನು ನಿಷೇಧಿಸಿದರೂ ಇಂತಹ ಪ್ರಭಾವಿಗಳು ಸಾರಾಯಿ ಗುತ್ತಿಗೆ ಮತ್ತು ಮಾರಾಟದಲ್ಲಿ ತೊಡಗಿ ತಮ್ಮ ಜೀವನವನ್ನು ಹಸನುಗೊಳಿಸಿಕೊಂಡರು. ಆದರೆ, ಲಕ್ಷಾಂತರ ಮಂದಿ ಬೀದಿಗೆ ಬಿದ್ದರು.
ಬೆಂಗಳೂರು ಗ್ರಾಮಾಂತರ, ಉಡುಪಿ ಸೇರಿದಂತೆ ಕೆಲವೇ ಕೆಲವು ಜಿಲ್ಲೆಗಳಲ್ಲಿ ತೆಂಗಿಗೆ ನುಸಿರೋಗ ಬಂದ ಕಾರಣ ಅಲ್ಲಿ ನೀರಾ ಇಳಿಸಲು ಅವಕಾಶ ಮಾಡಿಕೊಡಲಾಗಿದೆ. ಆದರೆ, ತಮ್ಮ ತೋಟಗಳಲ್ಲಿ ರೈತರೇ ಹೆಚ್ಚಾಗಿ ನೀರಾ ಇಳಿಸಿ ಮಾರಾಟ ಮಾಡುತ್ತಿರುವುದರಿಂದ ಈಡಿಗ ಸಮುದಾಯಕ್ಕೆ ಇಲ್ಲಿ ಅವಕಾಶವೇ ಇಲ್ಲದಂತಾಗಿದೆ.
ಹೀಗಾಗಿ ಅವರ ಎದುರು ಇದ್ದದ್ದು ಒಂದೇ ಮಾರ್ಗ. ಅದೆಂದರೆ, ಕೂಲಿ ಮಾಡಿ ಕುಟುಂಬ ನಿಭಾಯಿಸಿಕೊಳ್ಳುವುದು. ಅಂದಿನಿಂದ ಇಂದಿನವರೆಗೆ ಸಮುದಾಯದ ಶೇ. 80 ಕ್ಕೂ ಅಧಿಕ ಜನ ಕೂಲಿ- ನಾಲಿ ಮಾಡಿಕೊಂಡೇ ಜೀವನ ಸಾಗಿಸುತ್ತಿದ್ದಾರೆ. ಇನ್ನೂ ಕೆಲವರು ಕೃಷಿಯತ್ತ ವಾಲಿದ್ದಾರಾದರೂ ಅವರಿಗೆ ಅಗತ್ಯ ಇರುವ ಜಮೀನು ಇಲ್ಲದಂತಾಗಿದೆ.
ಸೇಂದಿ ನಿಷೇಧ ಮಾಡಿ ದಶಕಗಳೇ ಕಳೆದರೂ ಸರ್ಕಾರ ಮಾತ್ರ ಈ ಸಮುದಾಯಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸುವ ಗೋಜಿಗೆ ಹೋಗಿಲ್ಲ.
ಈಡಿಗ ಜಾತಿಯ ಐತಿಹಾಸಿಕ ಹಿನ್ನೆಲೆ ಕೌತುಕಮಯ. ಪುರಾಣಗಳ ಪ್ರಕಾರ ಈಡಿಗರು ಗೌಡ ಸಮುದಾಯಕ್ಕೆ ಸೇರಿದವರು. ರಾಮಾಯಣ, ಮಹಾಭಾರತ, ಸ್ಕಂದಪುರಾಣ, ಶಿವಪುರಾಣ ಸೇರಿದಂತೆ ಹಲವು ಪುರಾಣಗಳಲ್ಲಿ ಈ ಸಮುದಾಯದ ಉಲ್ಲೇಖವಿದೆ. ಸಂಶೋಧನೆಯೊಂದು ಹೇಳುವ ಪ್ರಕಾರ ಆದಿಶಂಕರಾಚಾರ್ಯ ಮುಂತಾದವರ ಕಾಲದಲ್ಲಿನ ಇತಿಹಾಸದಲ್ಲಿ ಈಡಿಗರು ಗೌಡ ವಂಶಸ್ಥಕ್ಕೆ ಸೇರಿದವರು ಎಂದು ಹೇಳಲಾಗಿದೆ. ಹೀಗಾಗಿ ಇದು ಅತ್ಯಂತ ಪ್ರಾಚೀನ ಸಮುದಾಯವೂ ಹೌದು.
ಈ ಸಮುದಾಯದವನ್ನು ಕರ್ನಾಟಕ ಸೇರಿದಂತೆ ದೇಶವಿದೇಶಗಳಲ್ಲಿ ಬೇರೆಬೇರೆ ಹೆಸರಿನಲ್ಲಿ ಕರೆಯಲಾಗುತ್ತಿದೆ. ಹಿಂದೂ ಧರ್ಮಕ್ಕೆ ಸೇರಿದ ಈ ಸಮುದಾಯ ಭಾರತದಲ್ಲಿ ಹೆಚ್ಚಾಗಿ ಕಂಡುಬರುವುದು ಕರ್ನಾಟಕ, ತಮಿಳುನಾಡು ಮತ್ತು ಆಂಧ್ರಪ್ರದೇಶದಲ್ಲಿ. ಉಳಿದ ರಾಜ್ಯಗಳಲ್ಲಿ ಇದ್ದಾರಾದರೂ ಸಂಖ್ಯೆ ಗೌಣವೆನಿಸಿದೆ. ಆಂಧ್ರದಲ್ಲಿ ಈ ಸಮುದಾಯವನ್ನು ಗೌಡ್, ಇಳಿಗರ್, ಈಡಿಗರ್ ಎಂದು, ತಮಿಳುನಾಡಿನಲ್ಲಿ ನಾಡಾರ್, ದೀವರ್ ಹಾಗೂ ಕರ್ನಾಟಕದಲ್ಲಿ ಈಡಿಗ, ಬಿಲ್ಲವ, ಇಳಿಗ, ಕುಮಾರಪೈಕ, ನಾಡಾರ್, ಹಳೆಪೈಕರು, ಈಳಿಗ, ಬಿಲ್ಲವರು, ದೇವರ್, ದೀವರ್, ಗಮಲ್ಲಾ, ಕಲಾಲ, ಬಂಢಾರಿ, ಬೆಲ್ಚಾಡ, ತಿಯಾನ್, ದಿಯಾನ್, ಎಝವ, ನಾಮಧಾರಿ, ಇಲ್ಲವನ್, ನಾಯಕ್, ದೀವರು ಎಂಬ ಪ್ರಮುಖ ಉಪಜಾತಿಗಳಿವೆ.
ಹೀಗೆ ಒಟ್ಟು ಕರ್ನಾಟಕದಲ್ಲಿ ಸಮುದಾಯದ 26 ಕ್ಕೂ ಹೆಚ್ಚು ಉಪಜಾತಿಗಳಿವೆ. ಇವರ ಸಂಖ್ಯೆ ಸುಮಾರು 40 ಲಕ್ಷ ಮೀರುತ್ತದೆ.
ರಾಜ್ಯದಲ್ಲಿ ಈ ಸಮುದಾಯ ಹೆಚ್ಚಾಗಿ ಕಂಡುಬರುವುದು ಶಿವಮೊಗ್ಗ, ಹಳೆಯ ಮೈಸೂರು ಭಾಗದಲ್ಲಿ. ನಂತರದ ಸ್ಥಾನದಲ್ಲಿ ಮಂಗಳೂರು ಮತ್ತು ಉಡುಪಿಯಲ್ಲಿ ಬಿಲ್ಲವ ಹೆಸರಿನಲ್ಲಿ ಹಾಗೂ ಉತ್ತರ ಕನ್ನಡ ಜಿಲ್ಲೆಯಲ್ಲಿ ನಾಯಕ್ ಹೆಸರಿನಲ್ಲಿ ಕರೆಯಲಾಗುತ್ತಿದೆ. ಇದಲ್ಲದೇ ಸಮುದಾಯವನ್ನು ಆರ್ಯ ಈಡಿಗ ಎಂದೂ ಕರೆಯಲಾಗುವುದು.
ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕವಾಗಿ ಇನ್ನೂ ಅಭಿವೃದ್ಧಿಯತ್ತ ಹೆಜ್ಜೆ ಹಾಕಲು ಹರಸಾಹಸ ಪಡುತ್ತಿದ್ದರೂ, ರಾಜಕೀಯವಾಗಿ ಸ್ವಲ್ಪ ಮಟ್ಟಿಗೆ ಪ್ರಗತಿ ಸಾಧಿಸಿದ ಹಿಂದುಳಿದ ವರ್ಗದ ಜಾತಿ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.
ವರನಟ, ಕನ್ನಡದ ಕಣ್ಮಣಿ ಡಾ.ರಾಜ್್ಕುಮಾರ್ ಮತ್ತು ಅವರ ಕುಟುಂಬದ ಬಹುತೇಕ ಸದಸ್ಯರು ಚಲನಚಿತ್ರಗಳ ಮೂಲಕ ಸಮುದಾಯವನ್ನು ಸಾಂಸ್ಕೃತಿಕವಾಗಿ ಶ್ರೀಮಂತಗೊಳಿಸಿದ್ದರೆ, ಬಂಗಾರಪ್ಪ, ಕಾಗೋಡು ತಿಮ್ಮಪ್ಪ, ಜನಾರ್ದನ ಪೂಜಾರಿ, ಆರ್.ಎಲ್. ಜಾಲಪ್ಪ ಮತ್ತು ಅವರ ಪುತ್ರ ನರಸಿಂಹಸ್ವಾಮಿ, ವಿನಯಕುಮಾರ್ ಸೊರಕೆ ಸೇರಿದಂತೆ ಹಲವರು ತಮ್ಮ ಮತ್ತು ತಮ್ಮ ಸಮುದಾಯದ ನೆರವಿನಿಂದ ರಾಜಕೀಯದಲ್ಲಿ ಹೆಸರು ಮಾಡಿದ್ದಾರೆ. ಪ್ರಸ್ತುತ ವಿಧಾನಸಭೆಯಲ್ಲಿ ಹರತಾಳು ಹಾಲಪ್ಪ, ಬೇಳೂರು ಗೋಪಾಲಕೃಷ್ಣ ಶಾಸಕರಾಗಿದ್ದಾರೆ.
ಇಷ್ಟೇ ಅಲ್ಲದೇ ನೆಟ್ಟಕಲ್ಲಪ್ಪ, ಎಚ್.ಜಿ. ರಾಮುಲು, ಕೆ.ಎನ್. ಗುರುಸ್ವಾಮಿ, ಟಿ.ವಿ.ವೆಂಕಟಸ್ವಾಮಿ, ಗಾಡಿ ಗಣಪತಿಯಪ್ಪ, ಎಚ್.ಆರ್. ಗವಿಯಪ್ಪ, ನಿಡಘಟ್ಟ ಎ.ಅಣ್ಣೇಗೌಡ, ದಾಮೋದರ ಆರ್.ಸುವರ್ಣ, ತಿಮ್ಮೇಗೌಡ, ಜೆ.ಪಿ. ನಾರಾಯಣಸ್ವಾಮಿ, ದಾಸಪ್ಪ, ಓಬಯ್ಯ ಸೇರಿದಂತೆ ಹತ್ತಾರು ಮಂದಿ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದವರಾಗಿದ್ದಾರೆ.
ನಮ್ಮ ಜನಾಂಗವನ್ನು ರಾಜಕೀಯ ಮತ್ತು ಸಾಮಾಜಿಕವಾಗಿ ಕಡೆಗಣಿಸಲಾಗುತ್ತಿದೆ. ರಾಜ್ಯದ ನಾಲ್ಕನೇ ಅತಿ ದೊಡ್ಡ ಜಾತಿಯಾಗಿದ್ದರೂ ಸೂಕ್ತ ಪ್ರಾತಿನಿಧ್ಯ ಸಿಗುತ್ತಿಲ್ಲ. ಸಾಮಾಜಿಕವಾಗಿ ಹಿಂದುಳಿದಿರುವ ಈ ವರ್ಗಕ್ಕೆ ರಾಜಕೀಯ ಕ್ಷೇತ್ರದಲ್ಲಿ ಆದ್ಯತೆ ನೀಡುವ ಮೂಲಕ ಅಭಿವೃದ್ಧಿಪಥದತ್ತ ಸಾಗಲು ಎಲ್ಲಾ ರಾಜಕೀಯ ಪಕ್ಷಗಳು ಆಸಕ್ತಿ ವಹಿಸಬೇಕಾಗಿದೆ- ಈ. ರಾಮಕೃಷ್ಣಯ್ಯ, ಅಧ್ಯಕ್ಷರು, ಅಖಿಲ ಕರ್ನಾಟಕ ಆರ್ಯ ಈಡಿಗರ ಕ್ಷೇಮಾಭಿವೃದ್ಧಿ ಸಂಘ.

3 comments: