Saturday 4 February 2012

ದಕ್ಷಿಣದ ಕಾಶ್ಮೀರದಲ್ಲಿ ಮರೆಯಾಗುತ್ತಿರುವ ಎರವರು

ನೆಲೆಯೂರಲು ಇವರಿಗೆ ಒಂದು ಸೂರಿಲ್ಲ. ಬೇಡಿ ತಿನ್ನುವಂತಹ ಪರಿಸ್ಥಿತಿ ಇದ್ದರೂ ನಾವು ಬಡವರು ಎಂಬ ಪರಿವೆಯೇ ಇಲ್ಲ. ಯಜಮಾನನ ಮನೆಯೇ ಇರಬೇಕಾದರೆ ಓದಿನರಮನೆಯ ಹಂಗು ನಮಗ್ಯಾಕೆ ಎಂದು ಇಂದಿಗೂ ನಾಲ್ಕಕ್ಷರ ಕಲಿಯದ ಸಮುದಾಯವಿದು.
ಸರ್ವರೋಗಕೂ ಸಾರಾಯಿ ಮದ್ದು ಎಂಬಂತೆ ಸದಾ ಮದ್ಯದ ದಾಸರಾಗಿ, ಅಪ್ಪ ಹಾಕಿದ ಆಲದಮರಕ್ಕೆ.... ಎಂಬಂತೆ ಅನಾರೋಗ್ಯಗೊಂಡರೆ ನಾಟಿ ಮದ್ದು, ಮಾಟ-ಮಂತ್ರಗಳ ಮೊರೆ ಹೋಗುತ್ತಾರೆ.
ದೇವರು, ಯಜಮಾನನಿದ್ದ ಮೇಲೆ ನಮ್ಮ ಭವಿಷ್ಯದ ಬಗ್ಗೆ ನಾವೇಕೆ ಚಿಂತಿಸಲಿ. ಕೈತುಂಬಾ ಹಣ ಗಳಿಸಿ ನಾವೇನು ಮಾಡಬೇಕು?
ಹೀಗೆ ವೈರುಧ್ಯದ ಪ್ರಶ್ನೆಗಳನ್ನು ಹಾಕುತ್ತಾ ಮೈ ದಣಿಸಿ ಹಗಲಿರುಳೂ ದುಡಿಯುತ್ತಿದ್ದಾರೆ. ಒಂದರ್ಥದಲ್ಲಿ ಇವರು ದಿನದ 24 ಗಂಟೆಯೂ ದುಡಿಯುವ ವರ್ಗದ ನಿಷ್ಠಾವಂತ ಶ್ರಮಿಕರು.
ಬಹುಶಃ ಇವರಿಲ್ಲದಿದ್ದರೆ ದಕ್ಷಿಣ ಭಾರತದ ಕಾಶ್ಮೀರವೆನಿಸಿರುವ ಕೊಡಗಿನ ಮೇಲ್ಜಾತಿಯ ಜನರು ಕಾಫಿ ತೋಟ ಮಾಡುತ್ತಿರಲಿಲ್ಲ. ಅದೇ ರೀತಿ ಈ ತೋಟಗಳನ್ನು ನಿಷ್ಠಾವಂತ ಶ್ರಮಿಕ ವರ್ಗದ ಕೈಗಿಟ್ಟು ದೇಶ ಕಾಯಲು ಸೈನ್ಯ ಸೇರುತ್ತಿರಲಿಲ್ಲವೇನೋ?
ಇವರು ಭೂಮಾಲೀಕರಿಗೆ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿರುವ ಈ ಸಮುದಾಯದ ಹೆಸರು ಎರವರು. ಆದರೆ, ದಿನದಿಂದ ದಿನಕ್ಕೆ ವರ್ಷದಿಂದ ವರ್ಷಕ್ಕೆ ಈ ಸಮುದಾಯದ ಸಂಖ್ಯೆ ಗಣನೀಯವಾಗಿ ಇಳಿಮುಖವಾಗುತ್ತಾ ಹೋಗುತ್ತಿದೆ. ಇದಕ್ಕೆ ಪ್ರಮುಖ ಕಾರಣ ಸ್ವಯಂಕೃತ ಅಪರಾಧ.
ಹೌದು. ತಮ್ಮ ಕುಟುಂಬದ ಏಳ್ಗೆ, ಸುಶಿಕ್ಷಿತರಾಗಬೇಕೆಂಬ ಹಪಹಪಿತನ, ಆರೋಗ್ಯವಂತರಾಗಿರಬೇಕೆಂಬ ಬಯಕೆ ಇದ್ದಿದ್ದರೆ ಸಮುದಾಯ ವಿನಾಶದ ಅಂಚಿಗೆ ತಳ್ಳಲ್ಪಡುತ್ತಿರಲಿಲ್ಲ. ಈ ಯಾವುದೇ ಆಲೋಚನೆ ಮಾಡದೇ ಇದ್ದುದರಿಂದಲೇ ಈ ವರ್ಗ ಇಂದು ಕರಗುತ್ತಿದೆ.
ರಾಜ್ಯದ ಕೊಡಗಿನ ದಕ್ಷಿಣ ಭಾಗ ಮತ್ತು ಕೇರಳ-ಕರ್ನಾಟಕ ಗಡಿಭಾಗದ ವಯನಾಡು ಜಿಲ್ಲೆಗಳಲ್ಲಿ ಈ ಬುಡಕಟ್ಟು ಪಂಗಡದ ಕುಟುಂಬಗಳು ನೆಲೆಸಿವೆ. ಇವರು ಮೂಲತಃ ಕೇರಳದವರು ಎನ್ನುವ ಪ್ರತೀತಿ ಇದೆ. ಇವರ ಮೂಲವನ್ನು ಕೆದಕುತ್ತಾ ಹೋದರೆ ಹಲವಾರು ಕತೆಗಳು, ಐತಿಹ್ಯಗಳು ಕೇಳಿಬರುತ್ತವೆ. ಆದರೆ, ಅನಾದಿ ಕಾಲದಿಂದಲೂ ಹೇಳಿಕೊಂಡು ಬಂದಿರುವ ಕತೆಯ ಪ್ರಕಾರ ಎರವರು, ಕಾಲಚಾತ ಎಂಬ ಮೂಲ ಪುರುಷನ ಸಂತತಿಯಿಂದ ಬಂದವರು.
ಪ್ರತೀತಿಯಂತೆ ಹಿಂದೆ ಇವರಿಗೆ ಏಳು ತಲೆಮಾರಿನವರೆಗೆ ಗಂಡು ಸಂತತಿಯೇ ಇರಲಿಲ್ಲವಂತೆ. ಆಗ ಚಾತ ಮತ್ತು ಚಾತಿಯೆಂಬ ಎರಡು ಮಣ್ಣಿನ ಮೂರ್ತಿಗಳನ್ನು ಮಾಡಿ ಚಾತನ(ಪುರುಷ) ಕೈಲಿ ಒನಕೆ ಕೊಟ್ಟು, ಚಾತಿಯ(ಮಹಿಳೆ) ಕೈಲಿ ಮೊರ ಕೊಟ್ಟು ಎರಡೂ ಮೂರ್ತಿಗಳಿಗೆ ಜೀವ ಕೊಡಲಾಗಿತ್ತಂತೆ. ಆಗಿನಿಂದ ಗಂಡು ಸಂತತಿ ಹೆಚ್ಚಾಯ್ತು ಎಂದು ಹೇಳಲಾಗುತ್ತಿದೆ.
ಕೇರಳದ ವಯನಾಡಿನಿಂದ ರಾಜ್ಯಕ್ಕೆ ಬಂದವರನ್ನು ಪಣಿಯರೆಂದು, ಕೇರಳದಲ್ಲೇ ಉಳಿದುಕೊಂಡವರನ್ನು ಪಂಜಿರಿಯರೆಂದೂ ಕರೆಯಲಾಗುತ್ತಿದೆ.
ಕಪ್ಪನೆ ಮೈಬಣ್ಣದ ಸ್ವಲ್ಪ ಬಲಾಢ್ಯ ಶರೀರದ ಮೊಣಕಾಲಿವರೆಗೆ ಕಟ್ಟುವ ಪಂಚೆ ಉಟ್ಟವರು ಕಂಡರೆ ಅವರೇ ಎಳವರು ಎಂದು ಸುಲಭವಾಗಿ ಗುರುತಿಸಬಹುದು. ಕೆದರಿದ ಗುಂಗುರು ಕೂದಲು ಹೊಂದಿರುವ ಸಮುದಾಯದ ಭಾಷೆ- ಸಂಸ್ಕೃತಿಯಲ್ಲಿ ಹಲವು ವೈವಿಧ್ಯತೆಗಳನ್ನು ಕಾಣುತ್ತೇವೆ. ಕರ್ನಾಟಕದಲ್ಲಿದ್ದರೂ ಇತ್ತ ಕನ್ನಡವೂ ಅಲ್ಲದ, ಕೊಡಗಿನಲ್ಲಿದ್ದರೂ ಅತ್ತ ಕೊಡವವೂ ಅಲ್ಲದ, ಕೇರಳದಿಂದ ವಲಸೆ ಬಂದವರಾದರೂ ಮಲಯಾಳಂ ಭಾಷೆಯನ್ನೂ ಅಲ್ಲದ ರೀತಿಯ ಭಾಷೆಯಲ್ಲಿ ಇವರು ಮಾತನಾಡುತ್ತಾರೆ. ಒಂದು ರೀತಿಯಲ್ಲಿ ಮಲಯಾಳಂ-ಕೊಡವ-ಕನ್ನಡ-ತೆಲುಗು ಮಿಶ್ರಿತ ಭಾಷೆ ಇವರದ್ದು.
ಇದರ ದ್ಯೋತಕವಾಗಿ ತಲೆತಲಮಾರಿನಿಂದ ಗಂಡಸರು ಬಿದಿರಿನ ಬೊಂಬಿನಿಂದ ತಾವೇ ತಯಾರಿಸಿದ ಶಹನಾಯಿ ಮಾದರಿಯ ಚೀನಿ ಎಂಬ ಸಾಧನ ಮತ್ತು ಪ್ರಾಣಿಗಳ ಚರ್ಮದಿಂದ ತಯಾರಿಸಿದ ಢಮರು ಆಕಾರದ ದೊಡ್ಡ ಸಾಧನವನ್ನು ಬಾರಿಸುತ್ತಾರೆ. ಈ ಢಮರು ಆಕಾರದ ಸಾಧನಕ್ಕೆ 'ದುಡಿ' ಎಂದು ಕರೆಯಲಾಗುತ್ತದೆ. ಗಂಡಸರು ಈ ವಾದ್ಯಗಳನ್ನು ನುಡಿಸುತ್ತಿದ್ದರೆ, ಅದರ ತಾಳಕ್ಕೆ ತಕ್ಕಂತೆ ಮೊರ ಹಿಡಿದ ಮಹಿಳೆಯರು ಹೆಜ್ಜೆ ಹಾಕುತ್ತಿದ್ದರು.
ಪ್ರತಿದಿನ ಸಂಜೆ ಇಂತಹ ಕಾರ್ಯಕ್ರಮಗಳನ್ನು ತಮ್ಮ ಪ್ರದೇಶಗಳಲ್ಲಿ ನಡೆಸುತ್ತಿದ್ದ ಎರವರು ತಮ್ಮ ಸಾಂಸ್ಕೃತ ಸೊಬಗನ್ನು ಮೆರೆಯುತ್ತಿದ್ದರು.
ಇಂದು ಕೊಡಗಿನಲ್ಲಿ ಚೀನಿ ಮತ್ತು ದುಡಿಯ ನಾದಗಳು ಹೊರಹೊಮ್ಮುತ್ತಿಲ್ಲ. ಅದರ ಬದಲಿಗೆ ವಿನಾಶದ9 ಅಂಚಿನಲ್ಲಿರುವ ಎರವರ ಆರ್ತನಾದ ಕೇಳಿಯೂ ಕೇಳದ ಸ್ಥಿತಿಯಲ್ಲಿದೆ.
ಹೀಗಾಗಿ ಇವರ ಪರಿಸ್ಥಿತಿ ಹೇಗಿದೆಯೆಂದರೆ, 'ಅಂಬಿಲ ಮೊಟ್ಟೆ ತೂಂಗ್್ತುಪೆ ದುಡಿ ಮುರ್ಕುವ ನಲ್ಲ, ಕೊಚ್ಚುವ ಮಿರಾತಿನ ಕೂಟುಪಲ್ಲು ಚೀನಿಪಿನಿಪನಲ್ಲ...'
ಅರ್ಥ: ಎರವರ ಹುಡುಗನ ಚರ್ಮ ದುಡಿಗೆ ಆಗೋದಿಲ್ಲ, ಹಣ್ಣು ಹಣ್ಣು ಮುದುಕಿಯ ಚರ್ಮ ಚೀನಿ ನುಡಿಸೋದಿಲ್ಲ.
ಅಂದರೆ, ಎರವರು ದುಡಿ ಮತ್ತು ಚೀನಿ ನುಡಿಸುವುದನ್ನು ಮರೆತಿರುವುದನ್ನು ವ್ಯಂಗ್ಯ ಮಾಡಲೆಂದೇ ಹುಟ್ಟಿಕೊಂಡಿರುವ ಗಾದೆ ಇದು.
ಇಷ್ಟಕ್ಕೆಲ್ಲಾ ಕಾರಣಗಳೇನೆಂಬುದನ್ನು ಹುಡುಕುತ್ತಾ ಹೋದರೆ ತಪ್ಪಿತಸ್ಥರ ಸ್ಥಾನದಲ್ಲಿ ಈ ಎರವರೇ ನಿಲ್ಲುತ್ತಾರೆ. ಏಕೆಂದರೆ, ಇವರ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಶಾಲೆ ತೆರೆದು ಮಕ್ಕಳನ್ನು ಶಾಲೆಗೆ ಕಳುಹಿಸಿ ಎಂದು ಕೇಳಿದರೆ, 'ನಮ್ಮ ಮಕ್ಕಳು ಕಲಿತರೆ ನಿಮಗೇನು ಲಾಭ?' ಎಂಬ ಪ್ರಶ್ನೆ ಸಮುದಾಯದ ಮುಖಂಡರಿಂದ ಬರುತ್ತದೆ.
ನಿಮ್ಮ ಜೀವನ ಸುಮಧುರವಾಗಲೆಂದು ಅಲ್ಪಸ್ವಲ್ಪ ಹಣ ಕೂಡಿಡಿ ಎಂದರೆ, ಅದರ ಉಸಾಬರಿ ನಮಗ್ಯಾಕೆ ಎನ್ನುತ್ತಾ,
'ಎನಾಕೆಂತೈ ಚಾಲ. ಪಾಪೆಂಗು ಪಾಪೆಂಗು ಚಾಲ'....
ಅಂದರೆ, ದುಡ್ಡಿನ ಗೊಡವೆ ನಮಗ್ಯಾಕೆ. ನಮಗೆ ಸಾಲ ಬೇಡ. ಏನಿದ್ದರೂ ಒಬ್ಬ ಯಜಮಾನ ಮತ್ತು ಮತ್ತೊಬ್ಬ ಯಜಮಾನನ ಮಧ್ಯೆ ಸಾಲವಷ್ಟೆ ಎನ್ನುತ್ತಾರೆ.
ಇದರರ್ಥ, ಕೊಡಗಿನಲ್ಲಿ ಚೀಟಿಯ ಮೂಲಕ ಮನೆಯ ಆಳನ್ನು ಆಯ್ದುಕೊಳ್ಳುವ ಊಳಿಗಮಾನ್ಯ ಪದ್ಧತಿ ಇಂದಿಗೂ ಜಾರಿಯಲ್ಲಿದೆ. ಅಂದರೆ, ಎರವ ಸಮುದಾಯದ ಕೂಲಿಯಾಳು ಒಬ್ಬ ಭೂಮಾಲೀಕನ ಮನೆಯಲ್ಲಿ ಇಂತಿಷ್ಟು ಹಣ ತೆಗೆದುಕೊಂಡು ಕೂಲಿ ಕೆಲಸ ಮಾಡುತ್ತಿರುತ್ತಾನೆ. ಇದೇ ಆಳು ನನಗೆ ಬೇಕೆಂದು ಮತ್ತೊಬ್ಬ ಬಯಸುತ್ತಾನೆ. ಆಗ ಮೊದಲ ಯಜಮಾನ ಆಳಿನ ಕೈಲೊಂದು ಚೀಟಿ ಕೊಟ್ಟು ಆಳಿನಿಂದ ನನಗೆ ಇಷ್ಟು ಹಣ ಬರಬೇಕಿದೆ. ಅದನ್ನು ನೀಡಿ ಆಳನ್ನು ನಿಮ್ಮವನನ್ನಾಗಿ ಮಾಡಿಕೊಳ್ಳಿ ಎಂದು ಬರೆದು ಹೊಸ ಯಜಮಾನನ ಬಳಿಗೆ ಕಳುಹಿಸುತ್ತಾರೆ.
ನಮ್ಮ ಹಣಕಾಸಿನ ವಿಚಾರವನ್ನು ಯಜಮಾನರೇ ನೋಡಿಕೊಳ್ಳುವಾಗ ದುಡ್ಡಿನ ಚಿಂತೆ ನಮಗ್ಯಾತಕೆ ಎನ್ನುತ್ತಾರೆ ಎರವರು.
ದಿನವಿಡೀ ಯಜಮಾನನ ತೋಟದಲ್ಲಿ ದೇಹವನ್ನು ದಂಡಿಸಿ ದುಡಿದು ಬರುತ್ತಿದ್ದ ಎರವರು ಮನೆಗೆ ಬರುತ್ತಿದ್ದಂತೆಯೇ 'ಅಂಡಲ್ ಕಞ ಕಞ. ಚಂಬಿಲ್ ನೀರು ನೀರು, ಚಕ್ಕರೆಕಾಯಿ ಮುರಿತಮ ಹ್ಯಾಟೆಮೀನು ಬರ್ತಮ, ಮುಚ್ಚಿಬೆಚ್ಚ ನೂಕಾಣುಕು ಎನ್ನ ಚಂದಮ...'
ಅರ್ಥ: ಒಲೆಯಲ್ಲಿ ಗಂಜಿ ಅನ್ನ ಅನ್ನ, ಚೆಂಬಲ್ಲಿ ನೀರು ನೀರು, ಕುಂಬಳಕಾಯಿ ಸಾರು, ಹುರಿದ ಹ್ಯಾಟೆಮೀನು ಪಕ್ಕದಲ್ಲಿದ್ದರೆ ಬಿಸಿ ಬಿಸಿ ಭೋಜನ ಎಂತಾ ಸೊಗಸು ಎನ್ನುತ್ತಿದ್ದ ಕಾಲವಿತ್ತು. ಆದರೆ, ಈಗ ಆ ಕಾಲ ಹೋಗಿ
ಬ್ರಾಂಡಿ ಶಾಪ್್ನಲ್ಲಿ ಮದ್ಯ ಏರಿಸಿ ತೂರಾಡುತ್ತಾ ಬರುವುದೇ ಸೊಗಸು ಎನ್ನುವಂತಾಗಿದೆ.
ಹೌದು. ಈ ಎರವರು ಯಾವ ರೀತಿ ಮದ್ಯದ ದಾಸರಾಗಿದ್ದಾರೆಂದರೆ, ಹೆಣ್ಣು- ಗಂಡು ಎಂಬ ಭೇದ ಭಾವ ಇಲ್ಲದೇ ಮದ್ಯ ಸೇವಿಸುತ್ತಾರೆ. ಈ ಮದ್ಯಪಾನದ ಅತಿರೇಕ ಪ್ರಾಣಕ್ಕೇ ಎರವಾಗಿರುವ ಪ್ರಸಂಗಗಳೂ ಜರುಗಿವೆ. ಮದ್ಯದ ನಶೆಯಲ್ಲಿ ಗಂಡ ಹೆಂಡತಿಯರು ನಾನು ಸತ್ತು ಹೋಗುತ್ತೇನೆ. ನೋಡೋಣ ನೀನೂ ಸತ್ತು ಹೋಗು ಎಂದು ಸವಾಲು ಪಾಟೀ ಸವಾಲು ಹಾಕುತ್ತಾರೆ. ಆಗ ಗಂಡ ನೇಣು ಹಾಕಿಕೊಳ್ಳುತ್ತಾನೆ. ನಶೆಯಲ್ಲಿದ್ದ ಹೆಂಡತಿಯೂ ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ.
ಇವರು ಪ್ರಕೃತಿ ಆರಾಧಕರು. ಆದರೆ, ಭೂಮಿಯಿಲ್ಲ. ಭೂಮಾಲೀಕನ ಭೂಮಿಯೇ ಇವರಿಗೆ ದೇವರು. ಈ ಭೂಮಿಯ ಉಳುಮೆಯಲ್ಲೇ ತೃಪ್ತಿ ಕಂಡುಕೊಂಡ ಸಮುದಾಯವಿದು. ನಿಷ್ಠೆಗೆ ಮತ್ತೊಂದು ಹೆಸರೇ ಎರವರು. ಹೀಗಾಗಿ ವರ್ಷವಿಡೀ ದುಡಿದ ಇವರಿಗೆ ಕೃತಜ್ಞತೆ ಸಲ್ಲಿಸುವುದಕ್ಕಾಗಿ ಭೂಮಾಲೀಕರು ಪ್ರತಿವರ್ಷದ ಸೆಪ್ಟಂಬರ್್ನಲ್ಲಿ ಕೈಲ್್ಪೊಲ್ದ್ ಎಂಬ ಹಬ್ಬ ಆಚರಿಸುತ್ತಾರೆ. ಹಂದಿಯನ್ನು ಕೊಯ್ದು ಅದರ ತಲೆ, ಕಾಲು ಮತ್ತು ಇಂತಿಷ್ಟು ಮಾಂಸವನ್ನು ಎರವರಿಗೆ ನೀಡುತ್ತಾರೆ. ಜತೆಗೆ ಮದ್ಯವೂ ಇರುತ್ತದೆ.
ವರ್ಷವಿಡೀ ತನ್ನ ಮಾಲೀಕನಿಗೆ ನಿಷ್ಠರಾಗಿದ್ದ ಎರವ ಅಂದು ಮಾತ್ರ ತಿರುಗಿ ಬೀಳುತ್ತಾನೆ. ಅಂದು ಕಂಠಪೂರ್ತಿ ಕುಡಿದು ಮಾಲೀಕನಿಗೆ ವಾಚಾಮಗೋಚರವಾಗಿ ನಿಂದಿಸುತ್ತಾನೆ. ಆದರೆ, ಮಾಲೀಕ ಇದಕ್ಕೆ ವಿರೋಧ ವ್ಯಕ್ತಪಡಿಸುವುದಿಲ್ಲ. ಏಕೆಂದರೆ, ಆತ ತನ್ನ ನಿಷ್ಠಾವಂತ ಕಾರ್ಮಿಕ. ಅವನಿಂದಲೇ ತನ್ನ ಜೀವನ ಸಾಗುತ್ತಿರುವುದನ್ನು ಅರಿತಿರುತ್ತಾನೆ. ನಗುಮೊಗದಿಂದಲೇ ಎರವನ ಬೈಗುಳವನ್ನು ಸಹಿಸಿಕೊಳ್ಳುತ್ತಾನೆ. ಮರುದಿನ ಯಥಾಸ್ಥಿತಿಯಲ್ಲಿ ಬರುವ ಎರವ ಮಾಲೀಕ ಹೇಳಿದ ಕೆಲಸವನ್ನು ನಿಷ್ಠೆಯಿಂದ ಮಾಡುತ್ತಾನೆ.
ಹೀಗಾಗಿ ದಕ್ಷಿಣ ಕೊಡಗಿನಲ್ಲಿ ನಡೆಯುವ ಆತ್ಮಹತ್ಯೆ ಪ್ರಕರಣಗಳಲ್ಲಿ ಶೇ. 90 ರಷ್ಟು ಎರವ ಸಮುದಾಯಕ್ಕೆ ಸೇರಿದವಾಗಿರುತ್ತವೆ. ಚೀನಿ ಮತ್ತು ದುಡಿಯನ್ನು ನುಡಿಸುವಂತಹ ಶ್ರೀಮಂತ ಕಲೆಗೆ ತಿಲಾಂಜಲಿ ಹೇಳಿರುವ ಈ ಸಮುದಾಯ ಗುಂಡಿನ ಮತ್ತಿನಲ್ಲೇ ಸದಾ ಇರುವಂತಾಗಿದೆ. ಪಟ್ಟಣಗಳಿಗೆ ಹೋದರೆ ಅಲ್ಲಿ ಕಂಠಪೂರ್ತಿ ಕುಡಿದು ರಸ್ತೆಗಳಲ್ಲೇ ಬೀಳುವಂತಹ ಪರಿಸ್ಥಿತಿಗೆ ತಮ್ಮನ್ನು ತಾವು ತಂದುಕೊಂಡಿದ್ದಾರೆ.
ಆರೋಗ್ಯದ ಬಗ್ಗೆ ಕಿಂಚಿತ್ತೂ ಕಾಳಜಿ ಹೊಂದಿರದ ಕಾರಣ ಸಮುದಾಯದ ಬಹುತೇಕ ಸಾವುಗಳು ಸಂಭವಿಸುವುದು ಅನಾರೋಗ್ಯದಿಂದಾಗಿಯೇ. ಕುಡಿತದ ದಾಸರಾಗಿರುವುದರಿಂದ ಇವರು 40 ರಿಂದ 45 ವರ್ಷಕ್ಕೇ ಮುದುಕರಂತೆ ಕಾಣುತ್ತಾರೆ. ಹೀಗಾಗಿ ಇವರ ಜೀವಿತಾವಧಿ ಮಧ್ಯವಯಸಿನಲ್ಲೇ ಮುಗಿದುಹೋಗುತ್ತಿರುವುದು ವಿಪರ್ಯಾಸ.
ಇದರ ಪರಿಣಾಮ ವಿರಾಜಪೇಟೆ, ಕುಶಾಲನಗರ, ಮಡಿಕೇರಿ ಸೇರಿದಂತೆ ಹಲವು ಭಾಗಗಳಲ್ಲಿ ಎರವರ ಸಂಖ್ಯೆ ಕ್ಷೀಣಿಸುತ್ತಾ ಬಂದಿದೆ. 2001 ರಲ್ಲಿ ಸುಮಾರು 20 ಸಾವಿರದಷ್ಟಿದ್ದ ಜನಸಂಖ್ಯೆ ಪ್ರಸ್ತುತ 15 ಸಾವಿರದ ಗಡಿ ದಾಟುವುದಿಲ್ಲ. ಇದಕ್ಕೆ ಮತ್ತಷ್ಟು ಪ್ರಮುಖ ಕಾರಣಗಳೆಂದರೆ, ಹಣದ ಆಸೆಗಾಗಿ ಗರ್ಭನಿರೋಧಕ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುತ್ತಿರುವುದು ಮತ್ತು ಕೆಲವರು ಇತರೆ ಧರ್ಮಕ್ಕೆ ಮತಾಂತರಗೊಳ್ಳುತ್ತಿರುವುದು.
ಹೀಗಾಗಿ ಎರವರ ಕುಟುಂಬಗಳು ಬೆಳೆಯುತ್ತಿಲ್ಲ. ಈ ಮೂಲಕ ರಾಜ್ಯದ ಒಂದು ಹಳೆಯ ಬುಡಕಟ್ಟು ಸಮುದಾಯ ತನ್ನ ವಿನಾಶಕ್ಕೆ ತಾನೇ ಕಾರಣವಾಗುತ್ತಿದೆ.
ವಿನಾಶದ ಅಂಚಿನಲ್ಲಿರುವ ಎರವರಲ್ಲಿ ಕುಡಿತದ ಚಟ ಬಿಡಿಸಿ, ಅವರ ಮಕ್ಕಳಿಗೆ ಕಡ್ಡಾಯವಾದ ಶಿಕ್ಷಣ ನೀಡುವಂತಹ ಕಠಿಣ ಕಾನೂನು ಪ್ರತ್ಯೇಕವಾಗಿ ಬರಬೇಕಾಗಿದೆ. ಅಲ್ಲದೇ, ಅವರಲ್ಲಿ ಸಾಮಾಜಿಕ ಪ್ರಜ್ಞೆಯನ್ನು ಮೂಡಿಸುವಂತಹ ಕೆಲಸ ಸರ್ಕಾರಗಳಿಂದ ಆಗಬೇಕಿದೆ - ಅಡ್ಡಂಡ ಕಾರ್ಯಪ್ಪ, ಎರವ ಸಮುದಾಯವನ್ನು ಅಧ್ಯಯನ ಮಾಡಿದವರು.

copyright@ravimalenahalli

No comments:

Post a Comment