Saturday 4 February 2012

ಅಭಿವೃದ್ಧಿ ಕಾಣದ "ಸಿದ್ದಿ'ಗಳು

ಭಾರತದ ಆಫ್ರಿಕನ್ನರು!
ದಟ್ಟ ಕಾನನವೇ ಇವರಿಗೆ ಸರ್ವಸ್ವ. ಕಾಡು ಬಿಟ್ಟು ನಾಡಿಗೆ ಬರಲು ಇವರ ಮನಸು ಒಪ್ಪುವುದಿಲ್ಲ. ಒಂದು ವೇಳೆ ಒಪ್ಪಿದರೂ ಅವರ ಆಚರಣೆಗಳು ಅವಕಾಶ ನೀಡುವುದಿಲ್ಲ.
ಕಾಡು ಮೇಡು ಅಲೆದು ಜೀವನ ಸಾಗಿಸುವ ಇವರು ನಾಗರಿಕ ಜನ ಸಮುದಾಯದ ಪಾಲಿಗೆ ಅಸ್ಪೃಶ್ಯರು. ಹೀಗಾಗಿಯೇ ಇಂತಹ ಸಮುದಾಯದ ಸಹವಾಸವೇ ಬೇಡ ಎಂಬ ಭಾವನೆಯಿಂದ ಕಾಡನ್ನು ಬಿಟ್ಟು ನಾಡಿಗೆ ಬರುತ್ತಿರಲಿಲ್ಲ. ಆದರೆ, ಇತ್ತೀಚಿನ ದಿನಗಳಲ್ಲಿ ಅರಣ್ಯ ಉತ್ಪನ್ನಗಳ ಸಾಗಣೆ ಮೇಲೆ ಹಾಕಿರುವ ನಿರ್ಬಂಧ ಮತ್ತು ಕಾಡಿನಲ್ಲಿ ವಾಸ ಮಾಡಲು ಹಲವಾರು ನಿಬಂಧನೆಗಳನ್ನು ವಿಧಿಸಿರುವುದರಿಂದ ಈ ಸಮುದಾಯ ಅನಿವಾರ್ಯವಾಗಿ ನಾಡಿನತ್ತ ವಲಸೆ ಹೋಗುವಂತಹ ಪರಿಸ್ಥಿತಿ ಎದುರಾಗಿದೆ.
ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಸಿಲುಕಿರುವುದು ಸಿದ್ದಿ ಸಮುದಾಯ.
ಇವರನ್ನು ಭಾರತದ ಆಫ್ರಿಕನ್ನರು ಎಂದು ಕರೆಯಲಾಗುತ್ತದೆ. ಏಕೆಂದರೆ, ಇವರ ಮೂಲ ಆಫ್ರಿಕಾ ದೇಶವೆಂಬ ಪ್ರತೀತಿ ಇದೆ. ಆದರೆ, ಇದಕ್ಕೆ ಪೂರಕವಾದ ಯಾವುದೇ ಲಿಖಿತ ದಾಖಲೆಗಳಿಲ್ಲ. ಆದಾಗ್ಯೂ ಕರ್ನಾಟಕ ಗೆಜೆಟಿಯರ್್ನಲ್ಲಿ ಈ ಸಿದ್ದಿಗಳ ಮೂಲದ ಬಗ್ಗೆ ಉಲ್ಲೇಖವಿದೆ. ಅದರಂತೆ ಪೋರ್ಚುಗೀಸರು ಮತ್ತು ಅರಬ್ ವ್ಯಾಪಾರಿಗಳು ಆಫ್ರಿಕಾದ ದಕ್ಷಿಣ ಭಾಗ ಅಥವಾ ಕೇಂದ್ರ ಭಾಗದಿಂದ ಈ ಸಮುದಾಯದವರನ್ನು ಕರೆತಂದು ಭಾರತದಲ್ಲಿ ಜೀತಕ್ಕಿಟ್ಟಿದ್ದರು.
ಇನ್ನೂ ಒಂದು ಮಾಹಿತಿ ಪ್ರಕಾರ 16 ಮತ್ತು 19 ನೇ ಶತಮಾನಗಳ ಅವಧಿಯಲ್ಲಿ ಆಫ್ರಿಕಾ ರಾಷ್ಟ್ರಗಳಾದ ಮೊಜಾಂಬಿಕ್, ಉಗಾಂಡ, ಕೆನ್ಯಾ, ಬೆಂಬಾ, ಕಾಂಗೋ, ನೈಜೀರಿಯಾ, ನಂಜಿಬಾರ್, ಇಥಿಯೋಪಿಯಾ ಮತ್ತು ತಾಂಜೇನಿಯಾದ ಕೆಲವು ಕುಟುಂಬಗಳನ್ನು ಪೋರ್ಚುಗೀಸರು, ಬ್ರಿಟಿಷರು ಮತ್ತು ಅರಬ್ ದೊರೆಗಳು ಗೋವಾ ರಾಜ್ಯವನ್ನು ಆಕ್ರಮಿಸಿಕೊಂಡಾಗ ಅಲ್ಲಿಗೆ ಕರೆ ತಂದಿದ್ದರು. ಹೀಗೆ ಕರೆತಂದ ಈ ಸಮುದಾಯ ದೊರೆಗಳ ಸೇವಕರಾಗಿ ದುಡಿಯುತ್ತಿದ್ದರು.
ಆದರೆ, ಈ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ. ಆದಾಗ್ಯೂ ಹೈದ್ರಾಬಾದ್್ನ ಸೆಂಟರ್ ಫಾರ್ ಸೆಲ್ಯುಲರ್ ಅಂಡ್ ಮಾಲ್ಯುಕ್ಯುಲರ್ ಬಯಾಲಜಿ(ಸಿಸಿಎಂಬಿ) ಸಂಸ್ಥೆ ನಡೆಸಿರುವ ಸಂಶೋಧನೆ ಪ್ರಕಾರ ಸಿದ್ದಿ ಸಮುದಾಯ ಆಫ್ರಿಕಾ ದೇಶದ ವಂಶವಾಹಿಯಾಗಿದೆ ಎಂಬುದನ್ನು ದೃಢಪಡಿಸಿದೆ.
ಇವರು ಕರ್ನಾಟಕಕ್ಕೆ ಬಂದು 400 ವರ್ಷಗಳೇ ಕಳೆದಿವೆ. ರಾಜ್ಯದ ಉತ್ತರಕನ್ನಡ ಜಿಲ್ಲೆಯ ಹಳಿಯಾಳ, ಅಂಕೋಲ, ಮುಂಡಗೋಡು, ಶಿರಸಿಯ ಅರಣ್ಯ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಿದ್ದಿಗಳಿದ್ದಾರೆ. ಬೆಳಗಾವಿ ಜಿಲ್ಲೆಯ ಖಾನಾಪುರ ಮತ್ತು ಧಾರವಾಡದ ಕಲಘಟಗಿಯಲ್ಲಿ ಸಿದ್ದಿ ಸಮುದಾಯ ವಾಸವಾಗಿದೆ. ಹೀಗೆ ಅಲ್ಲಲ್ಲಿ ಚದುರಿರುವ ಈ ಸಮುದಾಯದ ಒಟ್ಟು ಜನಸಂಖ್ಯೆ ಕೇವಲ 30 ಸಾವಿರದಷ್ಟು.
ಇನ್ನು ದೇಶದಲ್ಲಿ ಅತ್ಯಧಿಕವಾಗಿ ಸಿದ್ದಿ ಜನಾಂಗ ಇರುವ ರಾಜ್ಯವೆಂದರೆ ಗುಜರಾತ್. ಅಲ್ಲಿ ಸಿದಿ ಎಂದು ಕರೆಯಲಾಗುವ ಈ ಸಮುದಾಯದ ಜನಸಂಖ್ಯೆ ಸುಮಾರು 50 ಸಾವಿರ. ಅದೇ ರೀತಿ ಆಂಧ್ರಪ್ರದೇಶದಲ್ಲೂ ಇದೇ ಹೆಸರಿನಿಂದ ಕರೆಯಲ್ಪಡುವ ಇವರ ಸಂಖ್ಯೆ ಅತ್ಯಲ್ಪ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಸಿದ್ದಿಗಳು ಕಾಡಿನಲ್ಲಿ ವಾಸ ಮಾಡಿದರೆ, ಖಾನಾಪುರ ಮತ್ತು ಕಲಘಟಗಿಯಲ್ಲಿ ಜನವಸತಿ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ.
ನಾಗರಿಕ ಸಮಾಜದ ಪಾಲಿಗೆ ಇವರು ಅಸ್ಪೃಶ್ಯರು. ವಲಸೆ ಬಂದ ದಿನದಿಂದಲೂ ಇವರನ್ನು ಮೇಲ್ವರ್ಗದ ಜನಾಂಗ ಕೂಲಿ ನಾಲಿ ಮಾಡುವ ಸಮುದಾಯದವರೆಂದು ಗುರುತಿಸಿದೆ.ಹೀಗಾಗಿ ಸಮಾಜದ ಬಹುತೇಕ ಕುಟುಂಬಗಳ ಸದಸ್ಯರು ಮೇಲ್ವರ್ಗದ ಮನೆಗಳಲ್ಲಿ ಜೀತದಾಳುಗಳಾಗಿ ದುಡಿಯುತ್ತಿದ್ದಾರೆ.
ಇನ್ನೂ ಕೆಲವು ಕುಟುಂಬಗಳು ತಮ್ಮ ಮೂಲ ಕಸುಬು ಬೇಟೆಯನ್ನೇ ಮುಂದುವರೆಸಿಕೊಂಡು ಬಂದಿದ್ದವು. ಇದರ ಜತೆಗೆ ಜೇನು, ಮೆಣಸು, ರಾಮಪತ್ರೆ ಸೇರಿದಂತೆ ಮತ್ತಿತರೆ ಕಾಡಿನ ಉತ್ಪನ್ನಗಳನ್ನು ಸಂಗ್ರಹಿಸಿ ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದರು. ಆದರೆ, ಇತ್ತೀಚಿನ ದಿನಗಳಲ್ಲಿ ಇಂತಹ ಚಟುವಟಿಕೆಗಳಿಗೆ ಸರ್ಕಾರಗಳು ಕಡಿವಾಣ ಹಾಕಿದ ಪರಿಣಾಮ ಸಮುದಾಯ ಸಂಕಷ್ಟಕ್ಕೀಡಾಗಿದೆ.
ಆರ್ಥಿಕವಾಗಿ ತೀರಾ ಹಿಂದುಳಿದ ಸಮುದಾಯವಾಗಿರುವ ಸಿದ್ದಿಗಳಿಗೆ ಶಿಕ್ಷಣ ಎಂಬುದು ಅಷ್ಟಕ್ಕಷ್ಟೆ. ಏಕೆಂದರೆ, ಬಡತನ, ಜೀತದಂತಹ ಕಾರಣಗಳು ಶಿಕ್ಷಣಕ್ಕೆ ಅಘೋಷಿತ ನಿರ್ಬಂಧ ಹಾಕಿವೆ. ಕುಟುಂಬದ ಯಜಮಾನ ನಾನಾ ಕಾರಣಗಳಿಗೆ ಜಮೀನ್ದಾರನ ಬಳಿ ಸಾಲ ಮಾಡುತ್ತಾನೆ. ಅದನ್ನು ತೀರಿಸಲು ಸಾಧ್ಯವಾಗುವುದಿಲ್ಲ. ಹೀಗಾಗಿ ತಾನು, ತನ್ನ ಹೆಂಡತಿ ಮಕ್ಕಳನ್ನು ಜಮೀನ್ದಾರನ ಹೊಲ, ಗದ್ದೆಗಳಲ್ಲಿ ಜೀತದಾಳಾಗಿ ದುಡಿತಕ್ಕೆ ದೂಡುತ್ತಾನೆ.
ಸಾಮಾನ್ಯ ಜ್ಞಾನವಿಲ್ಲದಿರುವುದರ ಲಾಭ ಪಡೆದು ಸಿದ್ದಿಗಳನ್ನು ನಿರಂತರವಾಗಿ ಶೋಷಿಸುತ್ತಾ ಬಂದಿದ್ದಾರೆ. ಹೀಗಾಗಿ ಆರ್ಥಿಕ ಪ್ರಗತಿ ಎಂಬುದು ಸಿದ್ದಿಗಳಿಗೆ ಸಿದ್ಧಿಸಿಲ್ಲ.
ಇನ್ನು ಕೆಲವು ಕುಟುಂಬಗಳು ಬೇಟೆ ವೃತ್ತಿ ಬಿಟ್ಟು ಗೋವಾಕ್ಕೆ ವಲಸೆ ಹೋಗಿ ಅಲ್ಲಿ ಗಾರೆ ಕೆಲಸ ಮಾಡಿಕೊಂಡಿದ್ದಾರೆ. ಜತೆಗೆ ಓದಿನರಮನೆಗೆ ಹೋಗಬೇಕಾಗಿದ್ದ ಮಕ್ಕಳನ್ನೂ ಬಾಲ ಕಾರ್ಮಿಕರನ್ನಾಗಿಸಿದ್ದಾರೆ. ಇವರ ವಿಚಿತ್ರ ವೈಶಿಷ್ಟ್ಯತೆ ಎಂದರೆ, ನಾಳೆಯ ಬಗ್ಗೆ ಯೋಚಿಸುವುದೇ ಇಲ್ಲ. ಇಂದು ದುಡಿದದ್ದನ್ನು ಇಂದೇ ಕಳೆಯಬೇಕೆಂಬ ಹುಂಬತನ ಇವರದ್ದು. ಏಕೆ ಹೀಗೆ ಎಂದು ಕೇಳಿದರೆ, ನಮ್ಮಲ್ಲಿ ಶಕ್ತಿ ಇದೆ. ದುಡಿದು ತಿನ್ನುವ ತಾಕತ್ತು ಇದೆ ಎನ್ನುತ್ತಾರೆ.
ಬಡತನದ ಬೇಗೆಯಲ್ಲಿ ಬೇಯುತ್ತಿರುವ ಸಮುದಾಯದಲ್ಲಿ ಬಾಲ್ಯ ವಿವಾಹ ನಿಷಿದ್ಧವಲ್ಲ. ಶೈಕ್ಷಣಿಕವಾಗಿ ಹಿಂದೆ ಬೀಳಲು ಮತ್ತೊಂದು ಕಾರಣವೆಂದರೆ, ಶಾಲೆಗಳು ವಾಸ ಸ್ಥಳಕ್ಕಿಂತ ದೂರ ಇರುವುದು. ಬಸ್್ನಲ್ಲಿ ಪ್ರಯಾಣ ಮಾಡಿ ಮಕ್ಕಳು ಓದಬೇಕು. ಆದರೆ, ಬಸ್್ಚಾರ್ಜ್್ಗೆ ನೀಡಲು ಒಮ್ಮೊಮ್ಮೆ ಹಣ ಇರುವುದಿಲ್ಲ ಎನ್ನುವ ಕಾರಣವನ್ನು ಇವರು ನೀಡುತ್ತಾರೆ.
ಆದರೆ, ಇದಕ್ಕೆ ಅಪವಾದವೆಂಬಂತೆ ಸಮುದಾಯ ಮೋಹನ್್ಸಿದ್ದಿ ಎಂಬ ಯುವಕ ಎಂಎಸ್್ಡಬ್ಲ್ಯೂ ಸ್ನಾತಕೋತ್ತರ ಪದವಿ ಪಡೆದಿರುವುದು. ಜತೆಗೆ ಸಮುದಾಯದ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಇಡೀ ದೇಶದಲ್ಲಿರುವ ಸಿದ್ದಿ ಸಮುದಾಯದಲ್ಲಿ ಹೀಗೆ ಉನ್ನತ ವ್ಯಾಸಂಗ ಮಾಡಿದ ಏಕೈಕ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಮೋಹನ್್ಸಿದ್ದಿ ಪಾತ್ರರಾಗಿದ್ದಾರೆ.
ಇರುವ 30 ಸಾವಿರದಷ್ಟು ಜನರಲ್ಲಿ ಮೂರು ಧರ್ಮಗಳ ಸಮಾಗಮವಾಗಿದೆ. ಇವರಲ್ಲಿ ಹಿಂದೂಗಳು ಬಹುಸಂಖ್ಯಾತರಾದರೆ, ಕ್ರಿಶ್ಚಿಯನ್ ಮತ್ತು ಇಸ್ಲಾಂ ಧರ್ಮದವರೂ ಇದ್ದಾರೆ. ಹಿಂದೂಗಳಿಗೆ ಕೊಂಕಣಿ ಮಾತೃಭಾಷೆಯಾದರೆ, ಮುಸ್ಲಿಂರಿಗೆ ಉರ್ದು ಮತ್ತು ಕ್ರಿಶ್ಚಿಯನ್ನರಿಗೆ ಮರಾಠಿ ಮಾತೃಭಾಷೆಯಾಗಿದೆ.
ಮೂರು ಧರ್ಮಗಳು ತಮ್ಮ ಧರ್ಮಗಳಿಗೆ ಅನುಗುಣವಾಗಿ ಮದುವೆ ಸೇರಿದಂತೆ ಇತರೆ ಶುಭ ಸಮಾರಂಭಗಳನ್ನು ಮಾಡುತ್ತವೆ. ಇಲ್ಲೊಂದು ಗಮನಿಸಬೇಕಾದ ಅಂಶವೆಂದರೆ, ಕ್ರಿಶ್ಚಿಯನ್ ಮತ್ತು ಇಸ್ಲಾಂ ಸಮುದಾಯದಲ್ಲಿ ತಮ್ಮ ಧಾರ್ಮಿಕ ಗುರುಗಳು ಬಂದು ಮದುವೆ ಕಾರ್ಯಗಳನ್ನು ಮುಗಿಸಿ ಹೋದ ನಂತರ ಹಿಂದೂ ಧರ್ಮದ ರೀತಿಯಲ್ಲೇ ಗುಟ್ಟಾಗಿ ಕೆಲವು ಪದ್ಧತಿಗಳನ್ನು ಆಚರಿಸುತ್ತವೆ. ಹಿಂದೂಧರ್ಮದಲ್ಲಿ ಮಧುಮಗಳು ಗಂಡನ ಮನೆಯ ಹೊಸ್ತಿಲಿನಲ್ಲಿಟ್ಟ ಅಕ್ಕಿ ತುಂಬಿದ ಸೇರನ್ನು ಕಾಲಿನಿಂದ ಒದ್ದು ಒಳ ಹೋಗಬೇಕು. ಇದೇ ಪದ್ಧತಿಯನ್ನು ಕ್ರಿಶ್ಚಿಯನ್ ಮತ್ತು ಇಸ್ಲಾಂ ಧರ್ಮದವರು ಧರ್ಮಗುರುಗಳಿಗೆ ಗೊತ್ತಾಗದಂತೆ ಆಚರಣೆ ಮಾಡುತ್ತಾರೆ.
ಇವರಿಗೆ ಅರಣ್ಯವೇ ದೇವರು. ಆದರೆ, ಪೂಜಿಸುವುದು ತಮ್ಮ ಹಿರಿಯರನ್ನು. ಅಂದರೆ, ಮರಣ ಹೊಂದಿದ ತಮ್ಮ ಕುಟುಂಬದ ಹಿರಿಯರನ್ನು ದೇವರೆಂದು ಭಾವಿಸುತ್ತಾರೆ. ಅವರೇ ಆರಾಧ್ಯದೈವ. ಹೀಗಾಗಿ ವರ್ಷಕ್ಕೆ ಎರಡು ಬಾರಿ ಅಂದರೆ, ನವರಾತ್ರಿ ವೇಳೆ ಮತ್ತು ಹೋಳಿ ಹಬ್ಬದ ವೇಳೆ ಹಿರಿಯರ ಪೂಜೆಯನ್ನು ನೆರವೇರಿಸುತ್ತಾರೆ. ಅಲ್ಲದೇ ಮನೆಯಲ್ಲಿ ಯಾವುದೇ ಶುಭಸಮಾರಂಭಗಳು ಆರಂಭವಾಗುವ ಮುನ್ನ ಹಿರಿಯರನ್ನು ನೆನಪಿಸಿಕೊಳ್ಳಲೆಂದೇ ಪೂಜಿಸುತ್ತಾರೆ.
ಸಾಮಾಜಿಕವಾಗಿ ತೀರಾ ಹಿಂದುಳಿದಿರುವ ಈ ಸಿದ್ದಿಗಳನ್ನು ಮೀಸಲಾತಿ ವಿಚಾರದಲ್ಲಿ ಎರಡು ವರ್ಗಗಳನ್ನಾಗಿ ವಿಂಗಡಿಸಲಾಗಿದೆ. ಉತ್ತರ ಕನ್ನಡದಲ್ಲಿರುವ ಮೂರೂ ಧರ್ಮಗಳ ಸಿದ್ದಿಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಿದ್ದರೆ, ಉಳಿದ ಭಾಗಗಳ ಸಿದ್ದಿಗಳನ್ನು ಅಲ್ಪಸಂಖ್ಯಾತರ ಪಟ್ಟಿಗೆ ಸೇರಿಸಲಾಗಿದೆ.
ಬಹುತೇಕ ಆಫ್ರಿಕಾದ ಗುಡ್ಡಗಾಡು ಪ್ರದೇಶದ ಜನರಂತೆ ಜಾನಪದ ಉಡುಗೆ ತೊಡುಗೆಗಳಿಗೆ ಮಹತ್ವ ನೀಡುವ ಸಿದ್ದಿಗಳು, ಪ್ರಾಣಿಗಳ ಚರ್ಮದಿಂದ ತಾವೇ ತಯಾರಿಸುವ 'ಡಮಾಮ್್' ಎಂಬ ಹೆಸರಿನ ಡೋಲು ಬಾರಿಸುತ್ತ ವನ ದೇವತೆಯನ್ನು ಪೂಜಿಸುವ ದಿನ ಇಡೀ ರಾತ್ರಿ ಹಾಡಿ ಕುಣಿದು ಕುಪ್ಪಳಿಸುತ್ತಾರೆ.
ನಮ್ಮ ಸಮುದಾಯ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸೇರಿದಂತೆ ಎಲ್ಲಾ ವರ್ಗದಲ್ಲೂ ತೀರಾ ಹಿಂದುಳಿದಿದೆ. ಅರಣ್ಯವಾಸಿಗಳಾಗಿರುವ ನಮಗೆ ಅರಣ್ಯ ಪ್ರದೇಶದಲ್ಲಿ ವಾಸಿಸುವ ಹಕ್ಕನ್ನು ಕಸಿಯಲಾಗುತ್ತಿದೆ. ಶ್ರೀಮಂತ ವರ್ಗದಿಂದ ಶೋಷಣೆಗಳಾಗುತ್ತಿವೆ. ಇಂತಹ ಶೋಷಣೆಯನ್ನು ತಪ್ಪಿಸುವಂತಹ ಕೆಲಸವನ್ನು ಸರ್ಕಾರಗಳು ಮಾಡಿ, ನಮಗೂ ಬದುಕುವ ಹಕ್ಕನ್ನು ಕಲ್ಪಿಸಬೇಕಿದೆ - ಮೋಹನ್್ಸಿದ್ದಿ, ಸಿದ್ದಿ ಸಮುದಾಯದ ಮುಖಂಡ.

No comments:

Post a Comment