Saturday 4 February 2012

ಕುಣಬಿಯರ ಕಲ್ಯಾಣ ಪದ್ಧತಿಯ ಸೋಜಿಗ!

ಅಲ್ಲೊಂದು ಬೃಹದಾಕಾರವಾದ ವಡೆ. ಆ ವಡೆಯೇ ಮಧುಮಗನಿಗೆ ಅತ್ತೆ!
ಇಂತಹ ವೈಚಿತ್ರ್ಯ ಎಲ್ಲಾದರೂ ಕೇಳಿದ್ದೇವೆಯೇ?
ಇಲ್ಲ. ಆದರೂ ಇದು ಇಂದಿಗೂ ಚಾಲ್ತಿಯಲ್ಲಿರುವ ಸಂಪ್ರದಾಯ.
ರಾಜ್ಯದ ಪಶ್ಚಿಮಘಟ್ಟದಲ್ಲಿ ವಾಸಿಸುತ್ತಿರುವ ಹಲವಾರು ಬುಡಕಟ್ಟು ಸಮುದಾಯಗಳಲ್ಲಿ ಒಂದಾಗಿರುವ ಕುಣಬಿ ಸಮುದಾಯದಲ್ಲಿ ಇಂತಹ ಪದ್ಧತಿ ಜಾರಿಯಲ್ಲಿದೆ.
ಇವರ ಮದುವೆ ಸಂಪ್ರದಾಯ ನಾಗರಿಕ ಸಮಾಜವನ್ನು ಒಂದು ಕಾಣದ ಲೋಕಕ್ಕೆ ಕೊಂಡೊಯ್ಯುತ್ತದೆ.
ಎಲ್ಲಾ ಸಮುದಾಯದಂತೆ ಈ ಸಮುದಾಯದಲ್ಲಿ ಹೆಣ್ಣನ್ನು ನೋಡಲು ವರನ ಮನೆಯವರು ಮೊದಲು ಹೋಗುವುದಿಲ್ಲ. ಬದಲಿಗೆ ಊರ ಪ್ರಮುಖರೊಬ್ಬರು ವರನ ಕುಟುಂಬದ ರಾಯಭಾರಿಯಾಗಿ ವಧುವಿನ ಮನೆಗೆ ಹೋಗಿ ಹೆಣ್ಣನ್ನು ನೋಡುತ್ತಾರೆ. ಹೆಣ್ಣು ಮತ್ತು ಗಂಡಿನ ಬೆಡಗು ಒಂದೇ ಆಗಿದ್ದರೆ ಪರಸ್ಪರ ಮದುವೆಯಾಗುವಂತಿಲ್ಲ.
ಈ ರಾಯಭಾರಿ ಹೆಣ್ಣನ್ನು ನೋಡಿ ಆಕೆ ಒಪ್ಪಿಗೆಯಾದಲ್ಲಿ ಮಾತ್ರ ಹುಡುಗನ ಕುಟುಂಬಕ್ಕೆ ಸೇರಿದ ಐವರು ಮುತ್ತೈದೆಯರನ್ನು ಹುಡುಗಿಯ ಮನೆಗೆ ಕರೆದುಕೊಂಡು ಹೋಗುತ್ತಾನೆ. ಈ ಮುತ್ತೈದೆಯರು ಹೆಣ್ಣಿಗೆ ಎಣ್ಣೆ ಅರಿಶಿನ ಹಚ್ಚಿ ನಂತರ ಎಲೆ ಅಡಿಕೆ ಕೊಟ್ಟು ಪರಸ್ಪರ ಒಪ್ಪಿಗೆ ಸೂಚಿಸುತ್ತಾರೆ.
ಈ ಒಪ್ಪಿಗೆ ಆದ ಮರುದಿನವೇ ಮದುವೆ!
ಅಷ್ಟರ ವೇಳೆಗಾಗಲೇ ತಮ್ಮ ಬಂಧುಬಳಗದವರಿಗೆ ಆಹ್ವಾನ ನೀಡಲಾಗುತ್ತದೆ. ಮದುವೆ ನಡೆಯುವುದು ಹುಡುಗಿಯ ಮನೆಯಲ್ಲಲ್ಲ. ಬದಲಿಗೆ ಗಂಡಿನ ಮನೆಯ ವಿಶಾಲವಾದ ಆವರಣದಲ್ಲಿ. ಮದುವೆಯ ದಿನ ಹೆಣ್ಣು ಮತ್ತು ಗಂಡಿನ ಸೋದರ ಮಾವಂದಿರು ಎತ್ತಿಕೊಂಡು ಬಂದು ಹಸೆಮಣೆಯ ಮೇಲೆ ನಿಲ್ಲಿಸುತ್ತಾರೆ.
ಬಕುಳದ ಹೂವಿನಿಂದ ಸಿದ್ಧಪಡಿಸಿದ ಹಾರಗಳನ್ನು ಗಂಡು ಹೆಣ್ಣು ಪರಸ್ಪರ ಬದಲಾಯಿಸಿಕೊಳ್ಳುತ್ತಾರೆ. ಇದಕ್ಕೆ ಪೌರೋಹಿತ್ಯ ವಹಿಸುವುದು 'ಮಾತ್ಯಾವಳಿ ಜಾಣ' ಎಂಬ ಸಮುದಾಯದ ಹಿರಿಯ ಪೂಜಾರಿ.
ಈ ಪ್ರಕ್ರಿಯೆ ಮುಗಿಯುತ್ತಿದ್ದಂತೆ ವಿವಾಹ ಬಂಧನವಾಗುತ್ತದೆ.
ಆದರೆ, ವಿಶಿಷ್ಟವೆಂದರೆ ಈ ಶುಭಸಮಾರಂಭದ ವೇಳೆ ವರ ತನ್ನ ಅತ್ತೆಯನ್ನು ನೋಡುವುದು ನಿಷಿದ್ಧ. ದೊಡ್ಡದಾದ ವಡೆಯೊಂದನ್ನು ತಯಾರು ಮಾಡುತ್ತಾರೆ. ಎಲ್ಲಾ ಶಾಸ್ತ್ರಗಳು ಮುಗಿಯುವವರೆಗೆ ವರನ ಪಾಲಿಗೆ ಈ ವಡೆಯೇ ಅತ್ತೆ. ಶಾಸ್ತ್ರಗಳ ನಂತರ ವಡೆಯೊಂದಿಗೆ ಅನ್ನ ಬಡಿಸುವ ಮಹಿಳೆಯೇ ಅತ್ತೆ. ಆಗಲೇ ವರ ಆಕೆಯ ಮುಖ ನೋಡುವುದು.
ಬುಡಕಟ್ಟು ಸಮುದಾಯಗಳಲ್ಲಿ ಅತ್ಯಂತ ಬಡತನದಲ್ಲಿರುವ ಸಮುದಾಯವೆಂದರೆ ಈ ಕುಣಬಿಯರು. ರಾಜ್ಯದಲ್ಲಿ ಸುಮಾರು 25 ಸಾವಿರದಷ್ಟು ಈ ಸಮುದಾಯದ ಜನಸಂಖ್ಯೆ ಇದೆ. ಬಹುತೇಕ ಕುಣಬಿಯರು ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ, ಯಲ್ಲಾಪುರ, ಅಂಕೋಲ, ಕಾರವಾರ, ಹೊನ್ನಾವರ, ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕುಗಳ ಪಶ್ಚಿಮಘಟದ ವನಸಿರಿಯ ಸೆರೆಯಲ್ಲಿ ಜೀವನ ಸಾಗಿಸುತ್ತಿದ್ದಾರೆ.
ದಕ್ಷಿಣ ಕನ್ನಡದ ಕರಾವಳಿ ಪ್ರದೇಶದಲ್ಲಿ ಜೀವಿಸುತ್ತಿದ್ದಾರೆ. ಆದರೆ, ಇವರಿಗೆ ಕುಡುಬಿಯರು ಎಂದು ಕರೆಯಲಾಗುತ್ತದೆ. ಆದರೆ, ಕುಣುಬಿಯರು ಮತ್ತು ಕುಡುಬಿಯರು ಸಮುದಾಯದ ಬಹುತೇಕ ಸಂಪ್ರದಾಯ, ಆಚಾರ ವಿಚಾರಗಳಲ್ಲಿ ಸಾಮ್ಯತೆ ಕಾಣಬಹುದು.
ದಕ್ಷಿಣ ಕನ್ನಡದ ಕರಾವಳಿ ತೀರದಲ್ಲಿನ ಕುಂದಾಪುರ, ಮಂಗಳೂರು, ಉಡುಪಿ ಬಾರ್ಕೂರು, ಮಂದರ್ತಿ, ಕೊಕ್ಕರ್ಣೆ, ಸುರಾಲು, ಬಿಲ್ಲಾಡಿ, ಹೆಸ್ಕುಂದ, ಹಾಲಾಡಿ, ಬಜಪೆ, ಕೊಲ್ಲೂರು ಸೇರಿದಂತೆ ಮತ್ತಿತರರೆ ಪ್ರದೇಶಗಳಲ್ಲಿ ಕುಡುಬಿಗಳು ವಾಸಿಸುತ್ತಿದ್ದಾರೆ.
ಕುಣಬಿ ಮತ್ತು ಕುಡುಬಿಯರ ಭಾಷೆ ಪ್ರಾದೇಶಿಕತೆಗೆ ತಕ್ಕಂತೆ ಇದೆ. ಕರಾವಳಿಯಲ್ಲಿ ತುಳು, ಗೋವಾಕ್ಕೆ ಸನಿಹದಲ್ಲಿರುವ ಉತ್ತರ ಕನ್ನಡದ ಕುಣಬಿಯರು ಕೊಂಕಣಿ ಮತ್ತು ಕುಂದಾಪುರ ಸೇರಿದಂತೆ ಮತ್ತೆ ಕೆಲವು ಭಾಗದಲ್ಲಿ ಕನ್ನಡ ಮಾತನಾಡುತ್ತಾರೆ.
1795 ರಲ್ಲಿ ಫ್ರಾನ್ಸಿಸ್ ಬುಕಾನನ್ ಎಂಬ ಸಂಶೋಧಕ ಪಶ್ಚಿಮಘಟ್ಟದಲ್ಲಿ ಸುತ್ತಾಡಿ ಕುಣಬಿಯರ ಬಗ್ಗೆ ಸಂಶೋಧನೆ ನಡೆಸಿದ್ದ. ಅವನ ಪ್ರಕಾರ ಕುಣಬಿಯರು ಕರ್ನಾಟಕ ಮೂಲದವರೇ ಎಂದು ಪ್ರತಿಪಾದಿಸಿದ್ದ. ಪೋರ್ಚುಗೀಸರ ಕಾಲದಲ್ಲಿ ಪ್ಲೇಗ್ ಸಂಭವಿಸಿದ್ದರಿಂದ ಮತ್ತು ಬಲವಂತದ ಮತಾಂತರಕ್ಕೆ ಹೆದರಿ ಕುಣಬಿಯರು ಗೋವಾ ರಾಜ್ಯಕ್ಕೆ ಗುಳೇ ಹೋಗಿದ್ದರು. ನಂತರದ ಅವಧಿಯಲ್ಲಿ ಮತ್ತೆ ಕರ್ನಾಟಕಕ್ಕೆ ಬಂದರು ಎಂಬ ವಾದಗಳೂ ಇವೆ. ಆದರೆ, ಈ ಮೂಲದ ಇನ್ನೂ ತರ್ಕಗಳು ಮುಂದುವರೆದಿವೆ.
ಇವರನ್ನು ಅಲೆಮಾರಿ ಬುಡಕಟ್ಟಿಗೆ ಸೇರಿದವರೆಂದು ಹೇಳಲಾಗುತ್ತಿದೆ. ಕಾಡಿನಲ್ಲಿ ಆಹಾರ ಪದಾರ್ಥಗಳ ಸಂಗ್ರಹಿಸಿ ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದರು. ಕಾಲ ಕ್ರಮೇಣ ಕಾಡಿನಲ್ಲೇ ಅಲ್ಪಸ್ವಲ್ಪ ಭೂಮಿಯನ್ನು ಉಳುಮೆ ಮಾಡುವುದನ್ನು ಕರಗತ ಮಾಡಿಕೊಂಡ ಸಮುದಾಯ 'ಕುಮರಿ ಬೇಸಾಯ' ಅಂದರೆ, ಸ್ಥಳಾಂತರ ಕೃಷಿ. ಖಾಲಿ ಬಿದ್ದ ಅರಣ್ಯ ಪ್ರದೇಶದ ಇಳಿಜಾರು ಪ್ರದೇಶವನ್ನು ಹಸನುಗೊಳಿಸಿ ಅಲ್ಲಿ ಬಿತ್ತನೆ ಮಾಡಿ ಚಿಲ್ಲರೆ ಆದಾಯ ಗಳಿಸುತ್ತಿದ್ದರು. ಆದರೆ, ಈ ಭೂಮಿಯ ಒಡೆಯರು ಮಾತ್ರ ಇವರಲ್ಲ. ಈ ಕೃಷಿಯನ್ನು ಅವಲಂಬಿಸಿದ ನಂತರ ಇವರು ಸ್ಥಳದಿಂದ ಸ್ಥಳಕ್ಕೆ ತಮ್ಮ ವಾಸ್ತವ್ಯವನ್ನು ಬದಲಾಯಿಸುವುದನ್ನು ಬಿಟ್ಟರು. ಹೀಗಾಗಿ ಇವರನ್ನು ಅರೆ ಅಲೆಮಾರಿಗಳು ಎನ್ನಲಾಗುತ್ತಿದೆ.
ಈ ಕುಮರಿ ಬೇಸಾಯದಿಂದ ಅಲ್ಪಸ್ವಲ್ಪ ಆದಾಯ ಗಳಿಸುತ್ತಿದ್ದ ಕುಣಬಿಯರು ದಿನ ಕಳೆದಂತೆ ಅರಣ್ಯ ಕಾನೂನುಗಳು ಕಠಿಣವಾಗುತ್ತಿದ್ದಂತೆ ಅನಿವಾರ್ಯವಾಗಿ ವೃತ್ತಿಯನ್ನು ಕೈಬಿಡಬೇಕಾಯಿತು. ಪರಿಣಾಮ ಬಹುತೇಕ ಎಲ್ಲಾ ಕುಟುಂಬಗಳು ಭೂ ಮಾಲೀಕರ ತೋಟ, ಗದ್ದೆಗಳಲ್ಲಿ ಕೂಲಿ ಮಾಡುವುದನ್ನೇ ತಮ್ಮ ಕಾಯಕವನ್ನಾಗಿಸಿಕೊಂಡಿವೆ. ಹೀಗಾಗಿ ತೀರಾ ಕಡುಬಡತನದ ಸೆರಗಿನಲ್ಲೇ ವಾಸಿಸುತ್ತಿರುವ ಇವರ ಸಾಮಾಜಿಕ ಮತ್ತು ಆರ್ಥಿಕ ಪರಿಸ್ಥಿತಿ ಈಗೇನೂ ಬದಲಾವಣೆಯಾಗಿಲ್ಲ. ಭೂಮಾಲೀಕರ ಶೋಷಣೆ ತಪ್ಪಿಲ್ಲ.
ಪ್ರಸ್ತುತ ಸನ್ನಿವೇಶದಲ್ಲಿ ಆಶ್ರಯ ನೀಡಿದ್ದ ಅರಣ್ಯ ಭೂಮಿ ಇವರ ಕೈತಪ್ಪಿ ಹೋಗಿದೆ. ಆಹಾರ ಸಂಗ್ರಹಣೆ ಮಾಡುವಂತಿಲ್ಲ. ಬೇಟೆಯಂತೂ ನಿಷಿದ್ಧ. ಈ ಎಲ್ಲಾ ಕಾರಣಗಳಿಂದಾಗಿ ಕಡುಬಡತನದ ಬೇಗೆಯಲ್ಲಿ ಬೇಯುತ್ತಿದ್ದ ಈ ಸಮುದಾಯ ಮತ್ತಷ್ಟು ಕೆಳಸ್ತರಕ್ಕೆ ತಳ್ಳಲ್ಪಟ್ಟಿದೆ.
ಇಲ್ಲಿ ಗಮನಿಸಬೇಕಾದ ಪ್ರಮುಖ ಅಂಶವೆಂದರೆ, ಈ ಬುಡಕಟ್ಟು ಸಮುದಾಯವನ್ನು ಗೋವಾ ರಾಜ್ಯದಲ್ಲಿ ಪರಿಶಿಷ್ಟ ಪಂಗಡಕ್ಕೆ ಸೇರಿಸಲಾಗಿದೆ. ಆದರೆ, ಕರ್ನಾಟಕದಲ್ಲಿ ಅರೆ ಅಲೆಮಾರಿ ಎಂದು ಪರಿಗಣಿಸಲಾಗಿದೆಯೇ ಹೊರತು ಯಾವುದೇ ಮೀಸಲಾತಿ ಸೌಲಭ್ಯವನ್ನು ಕಲ್ಪಿಸಿಲ್ಲ.
ಇತರೆ ಬುಡಕಟ್ಟು ಸಮುದಾಯಗಳ ರೀತಿಯಲ್ಲಿ ಕುಣಬಿ ಮತ್ತು ಕುಡುಬಿಯರು ಹೇಳಿಕೊಳ್ಳುವ ರೀತಿಯಲ್ಲಿ ಮುಂದುವರೆದಿಲ್ಲ. ಇದ್ದರೂ ಕೇವಲ ಬೆರಳೆಣಿಯಷ್ಟು ಜನ ಮಾತ್ರ ನಾಲ್ಕಕ್ಷರ ಕಲಿತಿದ್ದಾರೆ.
ತಮ್ಮ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು, ಕುಮರಿ ಬೇಸಾಯವನ್ನು ಸಕ್ರಮ ಮಾಡಬೇಕೆಂದು ಹಲವು ದಶಕಗಳಿಂದ ಹೋರಾಟಗಳನ್ನು ನಡೆಸುತ್ತಲೇ ಬಂದಿದ್ದಾರೆ. ಆದರೆ, ಧ್ವನಿ ಇಲ್ಲದವರ ಇವರ ಕೂಗು ಆಡಳಿತ ನಡೆಸುವವರ ಕಿವಿಗೆ ಕೇಳುತ್ತಿಲ್ಲ.
ಕುಣಬಿ ಸಮುದಾಯ ನಾಗರಿಕ ಸಮಾಜದಲ್ಲೇ ಅತ್ಯಂತ ಸಂಕಷ್ಟಕ್ಕೆ ಸಿಲುಕಿದೆ. ಇಂತಹ ದುರ್ಗತಿಯಲ್ಲಿ ಬದುಕುತ್ತಿರುವ ಸಮುದಾಯವನ್ನು ಸರ್ಕಾರ ಅರೆ ಅಲೆಮಾರಿ ಎಂದು ಪರಿಗಣಿಸಿದೆಯಾದರೂ ಯಾವುದೇ ಮೀಸಲಾತಿ ಸೌಲಭ್ಯವನ್ನು ನೀಡಿಲ್ಲ. ಹೀಗಾಗಿ ಇವರನ್ನು ಕನಿಷ್ಟ ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು. ತಲೆತಲಾಂತರದಿಂದ ಅರಣ್ಯ ಪ್ರದೇಶದಲ್ಲಿ ಉಳುಮೆ ಮಾಡಿಕೊಂಡು ಬಂದಿರುವ ಭೂಮಿಯ ಮಾಲೀಕತ್ವವನ್ನು ಕೊಡಬೇಕಾದ ಅಗತ್ಯತೆ ಇದೆ -ಡಾ. ಹಿ.ಚಿ. ಬೋರಲಿಂಗಯ್ಯ, ಬುಡಕಟ್ಟು ಅಧ್ಯಯನ ವಿಭಾಗ, ಕನ್ನಡ ವಿಶ್ವವಿದ್ಯಾಲಯ.

No comments:

Post a Comment