Saturday 4 February 2012

ಲಂಬಾಣಿ ಬದುಕಲ್ಲಿ ಮೂಡಬೇಕಿರುವ ಚಿತ್ತಾರ

ಲಂಬಾಣಿ ಅಥವಾ ಬಂಜಾರ. ಈ ಹೆಸರು ಕೇಳಿದಾಕ್ಷಣ ಚಿತ್ತಾರದ ಉಡುಗೆಗಳನ್ನು ಧರಿಸಿದ ಮಹಿಳೆಯರ ನೆನಪಾಗುತ್ತದೆ. ಇವರು ಬಡವರಾದರೂ ಉಡುಗೆಗಳಲ್ಲಿ ಮಾತ್ರ ಅವರ ಶ್ರೀಮಂತ ಕಲೆ ಮೈದಾಳಿರುತ್ತದೆ.
ಅಂದ ಹಾಗೆ ಇಂತಹ ಶ್ರೀಮಂತ ಕಲೆಯನ್ನು ಹೊತ್ತ ಲಂಬಾಣಿ ಅಥವಾ ಬಂಜಾರ ಸಮುದಾಯ ನಿಜಕ್ಕೂ ಆರ್ಥಿಕ ಮತ್ತು ಸಾಮಾಜಿಕವಾಗಿ ಶ್ರೀಮಂತವಾಗಿದೆಯೇ? ಈ ಪ್ರಶ್ನೆಗೆ ಉತ್ತರ ಹುಡುಕಲು ಹೋದರೆ ನಮಗೆ ಸಿಗುವುದು ಇಲ್ಲ ಎಂಬ ಉತ್ತರ.
ಅಷ್ಟಕ್ಕೂ ರಾಜ್ಯದಲ್ಲಿರುವ ಸುಮಾರು 25 ಲಕ್ಷದಷ್ಟು ಜನಸಂಖ್ಯೆಯ ಈ ಸಮುದಾಯ ಕರ್ನಾಟಕದ ಮೂಲದ್ದಲ್ಲ. ಶತಮಾನಗಳ ಹಿಂದೆ ರಾಜಸ್ಥಾನದಿಂದ ವಲಸೆ ಬಂದವರು. ಹೀಗಾಗಿ ಇವರು ನಮ್ಮ ರಾಜ್ಯದ ಶಾಶ್ವತ ಅತಿಥಿಗಳು.
ಇವರ ಕುಲಕಸುಬು ಉಪ್ಪು, ಆಹಾರ ಪದಾರ್ಥಗಳನ್ನು ಎತ್ತಿನ ಗಾಡಿ, ಒಂಟೆ ಮೇಲೆ ಹೇರಿಕೊಂಡು ರಾಜ್ಯದಿಂದ ರಾಜ್ಯಕ್ಕೆ ಸುತ್ತಾಡಿ ಮಾರಾಟ ಮಾಡುವುದು. ಹೀಗೆ ಮಾರಾಟ ಮಾಡುತ್ತಾ ರಾಜಸ್ಥಾನ ಮೂಲವನ್ನೇ ಬಿಟ್ಟು ನಮ್ಮ ರಾಜ್ಯವೂ ಸೇರಿದಂತೆ ದೇಶದ ಬಹುತೇಕ ರಾಜ್ಯಗಳಲ್ಲಿ ನೆಲೆಸಿದ್ದಾರೆ.
ಈ ಸಮುದಾಯವನ್ನು ವಿವಿಧ ರಾಜ್ಯಗಳಲ್ಲಿ ಲುವಣ, ಲುವಾಡಿಯಾ, ಲುಂಬಾಡಿಯಾ, ಬಂಜೋರಿ, ಬಂಜೂರಿ, ಬಂಜಾರಿ, ಪಿಂಡಾರಿ, ಬಂಗಾಲ, ಲಂಬಾಣಿ, ಲಂಬಾರ, ಲವಾಣಿ, ಲಭಾಣಿಮುಖ ಎಂದು ಕರೆಯಲಾಗುತ್ತಿದೆ. ನಮ್ಮಲ್ಲಿ ಲಂಬಾಣಿ ಮತ್ತು ಬಂಜಾರವೆಂಬ ಹೆಸರಿನಲ್ಲಿ ಕರೆಯಲಾಗುತ್ತದೆ. ಇದರಲ್ಲೇ ರಾಥೋಡ್, ಭುಖ್ಯಾ, ಚೌಹಾಣ್, ಅಮ್ಗೋಟ್, ಪವಾರ್, ಜಾಧವ್ ಸೇರಿದಂತೆ 70 ಕ್ಕೂ ಹೆಚ್ಚು ಉಪಜಾತಿಗಳನ್ನು ಕಾಣುತ್ತೇವೆ. ಪ್ರಮುಖವಾಗಿ ಗುಲ್ಬರ್ಗಾ, ದಾವಣಗೆರೆ, ಚಿತ್ರದುರ್ಗ, ಬೆಳಗಾವಿ, ಧಾರವಾಡ, ಗದಗ, ರಾಯಚೂರು ಸೇರಿದಂತೆ ರಾಜ್ಯದ ಪ್ರತಿ ಜಿಲ್ಲೆಯಲ್ಲೂ ಸುಮಾರು 3 ಸಾವಿರಕ್ಕೂ ಅಧಿಕ ತಾಂಡಾಗಳಲ್ಲಿ ನೆಲೆಸಿದ್ದಾರೆ.
ಬದುಕು ಕಿತ್ತುಕೊಂಡ ಬ್ರಿಟಿಷರು
ಇವರ ವ್ಯಾಪಾರವನ್ನೇ ಬ್ರಿಟಿಷರು ಕಿತ್ತುಕೊಂಡರು. ಏಕೆಂದರೆ, ಅವರದು ವ್ಯಾಪಾರ ಮನೋಭಾವವಾಗಿದ್ದು, ತಮ್ಮ ವ್ಯಾಪಾರಕ್ಕೆ ಅಡ್ಡಿ ಆಗುತ್ತಿದ್ದಾರೆ ಎಂಬ ಕಾರಣಕ್ಕೆ. ನಂತರ ಇವರ ಬದುಕು ಮೂರಾಬಟ್ಟೆಯಾಯ್ತು. ಹೀಗಾಗಿ ಮಹಿಳೆಯರು ಮಾಡಿಕೊಂಡು ಬರುತ್ತಿದ್ದ ಕುಸುರಿ ಕೆಲಸದ ಮೇಲೆಯೇ ಇವರ ಕುಟುಂಬ ನಿರ್ವಹಣೆ. ಹೀಗಾಗಿ ಬ್ರಿಟಿಷರು ದೇಶ ಬಿಟ್ಟು ಹೋಗುವವರೆಗೆ ಬಂಜಾರ ಸಮುದಾಯ ಸಂಕಷ್ಟಕ್ಕೆ ಎದುರಾಗಿತ್ತು, ನಂತರ ಮತ್ತೆ ಆಹಾರ ಪದಾರ್ಥಗಳ ಮಾರಾಟದಲ್ಲಿ ತೊಡಗಿತಾದರೂ ಅಷ್ಟರ ವೇಳೆಗೆ ವ್ಯಾಪಾರಿಗಳ ಸಂಖ್ಯೆ ಹೆಚ್ಚಾಗಿದ್ದರಿಂದ ಇವರಿಗೆ ಹೆಚ್ಚಿನ ಆದಾಯ ಬರದಂತಾಯಿತು.
ಪಾಶ್ಚಿಮಾತ್ಯ ಉಡುಗೆ
ಲಂಬಾಣಿ ಮಹಿಳೆಯರು ಧರಿಸುವ ಫೆಟಿಯಾ ಎಂಬ ಹೆಸರಿನ ಗಾಗ್ರಾ ಮತ್ತು ಕಂಚಾಲಿ ಹೆಸರಿನ ದಾವಣಿ ಎಲ್ಲರ ಕಣ್ಮನ ಸೆಳೆಯುತ್ತದೆ. ಈ ಧಿರಿಸು ಪಾಶ್ಚಿಮಾತ್ಯರ ಬಳುವಳಿ ಎಂದೇ ಹೇಳಲಾಗುತ್ತಿದೆ. ಅಲ್ಲಿನ ವಿನ್ಯಾಸ, ಕುಸುರಿ, ಗಾಜಿನ ಚಿತ್ತಾರಗಳು, ಪಾಟ್ಲಿ ಎಂಬ ರಟ್ಟೆ ಗಾತ್ರದ ಬಳೆಗಳು, ಅಂಗೈ ಅಗಲದ ಕಿವಿಯ ರಿಂಗುಗಳು ಹೀಗೆ ಹತ್ತು ಹಲವು ಬಗೆಯ ಸದಭಿರುಚಿಯ ವಿನ್ಯಾಸಗಳು ಉಡುಗೆಗಳಲ್ಲಿ ಕಾಣಸಿಗುತ್ತವೆ.
ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿಗತಿ
ಈ ಸಮುದಾಯದ ಆರ್ಥಿಕ ಮತ್ತು ಸಾಮಾಜಿಕವಾಗಿ ಅಷ್ಟೇನೂ ಹೇಳಿಕೊಳ್ಳುವಂತಹ ಸ್ಥಿತಿಯಲ್ಲಿಲ್ಲ. ಇಂದಿಗೂ ಸಮುದಾಯ ಸಮಾಜದ ಮುಖ್ಯವಾಹಿನಿಯಿಂದ ದೂರ ಉಳಿದಿದೆ. ಕುಲಕಸುಬನ್ನೇ ಬಿಟ್ಟಿರುವ ಸಮುದಾಯ ಬೆಟ್ಟ ಗುಡ್ಡಗಳಿಂದ ಸೌದೆ ತಂದು ಮಾರಾಟದಲ್ಲಿ ತೊಡಗಿದೆ. ಸಮುದಾಯದ ಕೆಲವು ಕುಟುಂಬಗಳು ಕಳ್ಳಭಟ್ಟಿ ಕಾಯಿಸಿ ಮಾರಾಟ ಮಾಡುವ ಕುಖ್ಯಾತಿಯನ್ನೂ ಪಡೆದಿವೆ. ಈಗಲೂ ಕೆಲವು ಪ್ರದೇಶಗಳಲ್ಲಿ ಈ ಕೆಟ್ಟ ಪದ್ಧತಿಯನ್ನು ಮುಂದುವರೆಸಿಕೊಂಡು ಬಂದಿವೆ. ಶಿಕ್ಷಣದಿಂದ ದೂರ ಉಳಿದಿದ್ದ ಸಮುದಾಯದ ಇತ್ತೀಚಿನ ಯುವಕರು ಉನ್ನತ ವ್ಯಾಸಂಗ ಮಾಡಿ ಉತ್ತಮ ಹುದ್ದೆಗಳನ್ನೂ ಪಡೆಯುತ್ತಿದ್ದಾರೆ.
ಖನಿರಾಂ, ರೂಪ್ಲಾನಾಯಕ್್ರಂತಹ ಐಎಎಸ್ ಅಧಿಕಾರಿಗಳೂ ಈ ಸಮುದಾಯಕ್ಕೆ ಸೇರಿದವರು. ಇವರ ಜತೆಗೆ ಕೆಲವು ಕೆಎಎಸ್ ಅಧಿಕಾರಿಗಳೂ ಇದ್ದಾರೆ.
ರಾಜಕೀಯವಾಗಿ ಹೇಳುವುದಾದರೆ, ಕಳೆದ ವಿಧಾನಸಭೆ ಚುನಾವಣೆಯಲ್ಲಿ 14 ಕ್ಷೇತ್ರಗಳಲ್ಲಿ ಸಮುದಾಯ ಅಭ್ಯರ್ಥಿಗಳು ಸ್ಪರ್ಧೆಗಿಳಿದಿದ್ದರು. ಇವರಲ್ಲಿ 7 ಮಂದಿ ಗೆಲುವು ಸಾಧಿಸಿ ಶಾಸಕರಾಗಿದ್ದಾರೆ.
ಸಮಾಜದಲ್ಲಿ ತೀರಾ ತುಳಿತಕ್ಕೆ ಒಳಗಾಗಿದ್ದ ಈ ಸಮುದಾಯ ಇತ್ತೀಚಿನ ವರ್ಷಗಳಲ್ಲಿ ಇತರೆ ಸಮುದಾಯಗಳಂತೆ ಮುಂದುವರೆಯಲು ಪ್ರಯತ್ನಿಸುತ್ತಿದೆ. ಆದರೆ, ಸರ್ಕಾರಗಳು ಸಮುದಾಯದ ಶ್ರೇಯೋಭಿವೃದ್ಧಿಗೆ ಹಮ್ಮಿಕೊಂಡಿರುವ ಕಾರ್ಯಕ್ರಮಗಳನ್ನು ಸೂಕ್ತ ರೀತಿಯಲ್ಲಿ ಕಾರ್ಯರೂಪಕ್ಕೆ ತಂದಾಗ ಮಾತ್ರ ಅಭಿವೃದ್ಧಿ ಕಾಣಲು ಸಾಧ್ಯ - ದ್ಯಾಮಾನಾಯಕ್ ಈಶಪ್ಪ ಚೌಹಾಣ್, ಕರ್ನಾಟಕ ಬಂಜಾರ ಸೇವಾಸಂಘದ ಗೌರವಾಧ್ಯಕ್ಷ.

1 comment:

  1. ಪ್ರೀತಿಯ ಬಾಳಜ್ಯೋತಿಯವರೆ ನಮಸ್ಕಾರ. ನಿಮ್ಮ ಸಂಪರ್ಕ ಸಿಗಲಿಲ್ಲ. ನಿಮ್ಮ ಬ್ಲಾಗ್ ಪ್ರಯತ್ನ ಚೆನ್ನಾಗಿದೆ. ನನ್ನ ಬ್ಲಾಗ್ ಕನ್ನಡ ಜಾನಪದ ನೋಡಿ. ನೀವು ಸಂಪರ್ಕಿಸಿ
    http://kannadajaanapada.blogspot.com
    cellnO: 9901445702

    ReplyDelete