Saturday 4 February 2012

ರಾಜರ ಪ್ರೀತಿಪಾತ್ರರಿಗೆ ರಾಜಕೀಯದಲ್ಲೂ ಪ್ರಾತಿನಿಧ್ಯ

ಹಳ್ಳಿಗಳನ್ನು ಕಣ್ಣಲ್ಲಿ ಕಣ್ಣಿಟ್ಟು ಕಾಯ್ದವರು. ರಾಜಮಹಾರಾಜರಿಗೆ ನಂಬಿಕಸ್ಥರಾಗಿದ್ದವರು. ಕೋಟೆಯೊಳಗೆ ಇರುವೆಯೂ ಪ್ರವೇಶಿಸದಂತೆ ನೋಡಿಕೊಂಡು ಸಂಸ್ಥಾನಗಳನ್ನು ಕಾಯಲೆಂದೇ ತಮ್ಮ ಜೀವನವನ್ನೇ ಮುಡಿಪಾಗಿಟ್ಟವರು.
ರಾಜರ ನಂತರ ಊರಿನ ಶಾನುಭೋಗರು, ಪಟೇಲರು, ಗೌಡರ ನಿಷ್ಠಾವಂತ ಸೇನಾನಿಗಳಾಗಿದ್ದವರು. ಹಿಂದೂಸ್ತಾನಕ್ಕೆ ಮುಕುಟಪ್ರಾಯದಂತಹ ಬೃಹತ್ ಕಾವ್ಯ 'ರಾಮಾಯಣ'ವನ್ನು ರಚಿಸಿಕೊಟ್ಟ ವಾಲ್ಮೀಕಿ ಮಹರ್ಷಿಯ ವಂಶಸ್ಥರಿವರು.
ವಾಲ್ಮೀಕಿಯನ್ನೇ ತಮ್ಮ ದೈವ ಎಂದು ಆರಾಧಿಸುವವರನ್ನು ವಾಲ್ಮೀಕಿಯೆಂತಲೂ, ಊರುಗಳನ್ನು ಕಾಯುವ ಮತ್ತು ಸಣ್ಣ ಪುಟ್ಟ ಸಂಸ್ಥಾನಗಳನ್ನು ಆಳಿದ್ದಕ್ಕೆ ನಾಯಕರೆಂದೂ, ಊರುಗಳಲ್ಲಿ ಪಾಳೇಗಾರಿಕೆ ಮಾಡಿಕೊಂಡಿದ್ದಕ್ಕೆ ಪಾಳೇಗಾರರೆಂತಲೂ, ಹಳ್ಳಿಗಳಲ್ಲಿ ನೀರು ಪೂರೈಸುವ ಕಾಯಕ ನಡೆಸಿಕೊಂಡು ಬಂದಿದ್ದಕ್ಕೆ ನೀರುಗಂಟಿ(ತಳವಾರ)ಗಳೆಂದೂ... ಹೀಗೆ ನಾನಾ ಹೆಸರಿನಲ್ಲಿ ಕರೆಯಲಾಗುತ್ತಿದೆ ಈ ನಾಯಕ ಸಮುದಾಯವನ್ನು.
ಇದರ ಜತೆಗೆ ರಾಜರ ಕಾಲದಿಂದಲೂ ಕಾಡು ಮೇಡುಗಳಲ್ಲಿ ಬೇಟೆ ಮಾಡುತ್ತಾ ಜೀವನ ಸಾಗಿಸುತ್ತಿದ್ದುದರಿಂದ ಬೇಡರೆಂಬ ಹೆಸರೂ ಈ ಜನಾಂಗಕ್ಕೆ ಬಂದಿದೆ.
ಈ ಸಮುದಾಯಕ್ಕೆ ಹೆಚ್ಚಾಗಿ ಕರೆಯುವ ಹೆಸರು ವಾಲ್ಮೀಕಿ ಎಂದು. ಈ ಹೆಸರು ಬಂದಿದ್ದರ ಹಿಂದೆ ಒಂದು ಐತಿಹ್ಯವೇ ಅಡಗಿದೆ.
ವಾಲ್ಮೀಕಿಯ ಮೂಲ ಹೆಸರು ರತ್ನಾಕರ. ಈತನ ವೃತ್ತಿ ಬೇಟೆಯಾಡುವುದು. ಹೀಗೆ ಬೇಟೆಯಾಡುವ ಸಂದರ್ಭದಲ್ಲಿ ರತ್ನಾಕರ ಕಾಡಿನಲ್ಲಿ ಮೈಮರೆತು ರಾಮನಾಮ ಧ್ಯಾನದಲ್ಲಿ ಮುಳುಗಿದ್ದಾಗ ಆತನ ಸುತ್ತ ಬೃಹತ್ತಾದ ಹುತ್ತ ಬೆಳೆದುಕೊಂಡಿತು ಎಂಬ ಪ್ರತೀತಿ ಇದೆ. ಸಂಸ್ಕೃತದಲ್ಲಿ ಹುತ್ತಕ್ಕೆ 'ವಲ್ಮೀಕಿ' ಎಂದು ಕರೆಯಲಾಗುತ್ತದೆ. ಹುತ್ತದಲ್ಲಿದ್ದ ರತ್ನಾಕರ ಇಡೀ ಹಿಂದೂಸ್ತಾನಕ್ಕೆ ಕೊಡುಗೆಯಾಗಿ ರಾಮಾಯಣ ರಚಿಸಿದ. ಹೀಗಾಗಿ ಬೇಡರ ಸಮುದಾಯದ ಈ ರತ್ನಾಕರ ಹುತ್ತದಲ್ಲಿದ್ದ ಧ್ಯಾನ ಮಾಡಿದ್ದರಿಂದ ದಿನ ಕಳೆದಂತೆ ವಾಲ್ಮೀಕಿಯಾಗಿ, ವಾಲ್ಮೀಕಿ ಮಹರ್ಷಿಯಾಗಿ ಬೇಡ ಸಂಕುಲಕ್ಕೆ ದೇವರಾದರು.
ಅಂದಿನಿಂದ ಬೇಡರ ಸಮುದಾಯ ವಾಲ್ಮೀಕಿ ಎಂದು ಪರಿಗಣಿಸಲ್ಪಟ್ಟಿದೆ.
ಇದೇ ಬೇಡರೆಂದರೆ ರಾಜರಿಗೆ ಎಲ್ಲಿಲ್ಲದ ಪ್ರೀತಿ-ವಿಶ್ವಾಸ. ಏಕೆಂದರೆ, ರಾಜರು ಬೇಟೆಗೆ ಹೋದಾಗಲೆಲ್ಲಾ ಈ ಬೇಡರನ್ನು ಕರೆದೊಯ್ಯುತ್ತಿದ್ದರು ಮತ್ತು ಅವರಿಗೆ ಬೇಟೆಯಾಡಲು ಸೂಕ್ತ ರೀತಿಯಲ್ಲಿ ಮಾರ್ಗದರ್ಶನ ನೀಡುತ್ತಿದ್ದರು.
ಈ ಬೇಡರಿಗೆ ಧೈರ್ಯವಂತರು ಎಂಬುದು ಅನ್ವರ್ಥನಾಮ. ಏಕೆಂದರೆ, ಮುಂದೆ ಎದುರಾಗುವ ಯಾವ ಅಪಾಯವನ್ನು ಲೆಕ್ಕಿಸದೇ ಮುನ್ನುಗ್ಗಿ ಬೇಟೆಯಾಡುವಂತಹ ಧೈರ್ಯ, ಸ್ಥೈರ್ಯ ಅವರಲ್ಲಿತ್ತು. ಹೀಗಾಗಿಯೇ ರಾಜರು ಬೇಡರನ್ನು ತಮ್ಮ ಸಂಸ್ಥಾನದಲ್ಲಿ ಸೈನಿಕರಾಗಿ ನೇಮಕ ಮಾಡಿಕೊಳ್ಳುತ್ತಿದ್ದರು. ವಿರೋಧಿ ಸೈನ್ಯದ ಸದ್ದಡಗಿಸಬಲ್ಲ ಯುದ್ಧ ನೈಪುಣ್ಯತೆ ಅವರಲ್ಲಿತ್ತು. ಆ ಕಾಲಕ್ಕೆ ಅವರಲ್ಲಿ ಗೆರಿಲ್ಲಾ ಮಾದರಿಯ ಹೋರಾಟವಿತ್ತು.
ರಾಜರ ಆಡಳಿತಗಳು ಪರ್ಯಾವಸನಗೊಳ್ಳುತ್ತಿದ್ದಂತೆಯೇ ದೇಶಕ್ಕೆ ದಂಡೆತ್ತಿ ಬಂದ ಬ್ರಿಟಿಷರ ಕಣ್ಣಿಗೆ ಮೊದಲು ಬಿದ್ದವರೇ ಈ ಬೇಡರು. ಏಕೆಂದರೆ, ಬ್ರಿಟಿಷರು ಭಾರತಕ್ಕೆ ಬರುವ ಮೊದಲೇ ಬೇಡರ ಹೋರಾಟದ ಬಗ್ಗೆ ತಿಳಿದುಕೊಂಡಿದ್ದರು.
ಅಲ್ಲಲ್ಲಿ ಸಣ್ಣ ಪುಟ್ಟ ಸಂಸ್ಥಾನಗಳಲ್ಲಿ, ಹಳ್ಳಿಗಳ ಸಮೂಹದಲ್ಲಿ ನಾಯಕರಾಗಿ ಆಡಳಿತ ನಡೆಸುತ್ತಿದ್ದ ಇವರನ್ನು ಮೊದಲು ಮಟ್ಟ ಹಾಕಲು ಬ್ರಿಟಿಷರು ಮುಂದಾದರು. ಆದರೆ, ಅವರ ಕೆಚ್ಚೆದೆಯ ಹೋರಾಟದ ಮುಂದೆ ಬ್ರಿಟಿಷರ ಆಟ ನಡೆಯಲಿಲ್ಲ. ಕ್ರಮೇಣ ದೇಶವನ್ನು ತಮ್ಮ ತೆಕ್ಕೆಗೆ ಹಾಕಿಕೊಂಡ ಬ್ರಿಟಿಷರು ಬೇಡರ ವಿರುದ್ಧ ಕಾನೂನು ಕ್ರಮ ಜರುಗಿಸುವ ದೃಷ್ಟಿಯಿಂದ 'ಕ್ರಿಮಿನಲ್ ಟ್ರೈಬ್ ಆಕ್ಟ್್' ಜಾರಿಗೆ ತಂದರು. ಈ ಮೂಲಕ ಕಾಡುಮೇಡುಗಳಲ್ಲಿ ಬೇಟೆಯಾಡುತ್ತಿದ್ದವರನ್ನು ಎಡಮುರಿ ಕಟ್ಟಿ ಶಿಕ್ಷಿಸಿದರು.
ಬ್ರಿಟಿಷರ ಹಾವಳಿ ಮತ್ತು ಬದಲಾದ ಸಂಸ್ಕೃತಿಯಿಂದಾಗಿ ಬೇಡರು, ವಾಲ್ಮೀಕಿ, ನಾಯಕರು ತಮ್ಮ ಕುಲಕಸುಬನ್ನೇ ಮರೆಯಬೇಕಾಯಿತು. ಆಧುನಿಕ ಜಗತ್ತಿಗೆ ಹೊಂದಿಕೊಳ್ಳಲೇಬೇಕಾದ ಅನಿವಾರ್ಯತೆ ಅವರ ಮುಂದೆ ಸವಾಲಾಗಿ ನಿಂತಿತು.
ಚಿತ್ರದುರ್ಗ, ಕೆಳದಿ, ರಾಯದುರ್ಗ, ಹರಪನಹಳ್ಳಿ, ತರೀಕೆರೆ, ಸಂತೆಬೆನ್ನೂರು, ನಾಯಕನಹಟ್ಟಿ, ಕಣಕುಪ್ಪೆ, ಸಿರಾ, ಗುಮ್ಮನಾಯಕನಪಾಳ್ಯ, ಹಾಗಲವಾಡಿ, ನಿಡಗಲ್ಲು, ಪರತಿಕೋಟೆ, ಬಾಣಾವರ ಸೇರಿದಂತೆ ಹಲವೆಡೆ ನಡೆದುಕೊಂಡು ಬಂದಿದ್ದ ನಾಯಕರ ಸಂಸ್ಥಾನಗಳು ಅಸ್ತಿತ್ವವನ್ನು ಕಳೆದುಕೊಂಡವು. ವೀರಮದಕರಿ ನಾಯಕ, ಸರ್ಜಪ್ಪನಾಯಕ, ದೊಡ್ಡ ಸಂಕಣ್ಣ ನಾಯಕ, ಉಮಾಜಿ ನಾಯಕರಂತಹ ಹಲವರು ಸಂಸ್ಥಾನಗಳನ್ನು ಆಳಿದವರು.
ಇಂತಹ ವೀರ ಯೋಧರ ಈ ಸಮುದಾಯದ ಈಗಿನ ಪರಿಸ್ಥಿತಿ ಹೇಳಿಕೊಳ್ಳುವಂತಿಲ್ಲ. ರಾಜ್ಯದೆಲ್ಲೆಡೆ ಹರಿದು ಹಂಚಿಹೋಗಿರುವ ಸಮುದಾಯ ತನ್ನ ಅಸ್ತಿತ್ವಕ್ಕಾಗಿ ಹೋರಾಟ ನಡೆಸುತ್ತಿದೆ.
ರಾಜ್ಯದಲ್ಲಿ ಚಿತ್ರದುರ್ಗ, ಬಳ್ಳಾರಿ, ಬೆಳಗಾವಿ, ರಾಯಚೂರು, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ದಾವಣಗೆರೆ, ಬಿಜಾಪುರ, ಚಾಮರಾಜನಗರ, ಯಾದಗಿರಿ, ಗುಲ್ಬರ್ಗ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಪ್ರಮುಖವಾಗಿ ಈ ಸಮುದಾಯ ಇದೆ.
ಈ ವಾಲ್ಮೀಕಿ ಸಮುದಾಯವನ್ನು ವಾಲ್ಮೀಕಿ, ಬೇಡ, ನಾಯಕ, ಬೇಡರ್, ತಳವಾರ, ಪಾಳೆಗಾರ ಸೇರಿದಂತೆ 15 ಕ್ಕೂ ಹೆಚ್ಚು ಹೆಸರಿನಲ್ಲಿ ಕರೆಯಲಾಗುತ್ತಿದೆ.
ಇಂದಿನ ಸ್ಥಿತಿಯನ್ನು ಗಮನಿಸಿದರೆ, ಇತರೆ ಪರಿಶಿಷ್ಟ ವರ್ಗಗಳಿಗೆ ಹೋಲಿಸಿದರೆ, ಈ ವಾಲ್ಮೀಕಿ ಸಮುದಾಯ ರಾಜಕೀಯ ಕ್ಷೇತ್ರದಲ್ಲಿ ಒಂದು ಹೆಜ್ಜೆ ಮುಂದಿದೆ. 18 ಶಾಸಕರು ಮತ್ತು ಇಬ್ಬರು ಸಂಸದರನ್ನು ಹೊಂದಿರುವ ಈ ಸಮುದಾಯ ಸ್ವಲ್ಪ ಮಟ್ಟಿಗೆ ರಾಜಕೀಯ ಅಸ್ತಿತ್ವವನ್ನು ಉಳಿಸಿಕೊಂಡಿದೆ. ಬಾಲಚಂದ್ರ ಜಾರಕಿಹೊಳಿ ಮತ್ತವರ ಸಹೋದರರು, ಬಿ.ಶ್ರೀರಾಮುಲು ಮತ್ತು ಅವರ ಸಹೋದರಿ ಜೆ.ಶಾಂತ, ರಾಜೂಗೌಡ ಸೇರಿದಂತೆ ಹಲವಾರು ಮುಖಂಡರು ರಾಜಕೀಯವಾಗಿ ಹೆಸರು ಮಾಡಿದವರು.
ಆದರೆ, ಸಾಮಾಜಿಕ ಮತ್ತು ಆರ್ಥಿಕ ಪರಿಸ್ಥಿತಿ ಅಷ್ಟಕಷ್ಟೆ. ರಾಜಕೀಯವಾಗಿ ಬಲಾಢ್ಯರಾದವರು ಆರ್ಥಿಕ ಪ್ರಗತಿ ಕಂಡಿದ್ದರೆ, ಉಳಿದ ಶೇ. 90 ಕ್ಕೂ ಹೆಚ್ಚು ಮಂದಿ ದುಸ್ಥಿತಿಯಲ್ಲಿದ್ದಾರೆ.
ಏಕೆಂದರೆ, ಅವರು ಹಿಂದಿನಿಂದಲೂ ನಂಬಿಕೊಂಡು ಬಂದಿದ್ದ ಬೇಟೆ, ಪಾಳೇಗಾರಿಕೆ, ತಳವಾರಿಕೆ ಸೇರಿದಂತೆ ಹಲವು ಕುಲಕಸುಬುಗಳು ಇನ್ನಿಲ್ಲದಂತಾಗಿವೆ. ಈ ಕುಲಕಸುಬನ್ನು ಕೈಬಿಟ್ಟಿರುವ ಸಮುದಾಯ ಈಗ ವ್ಯವಸಾಯ, ಜಾನುವಾರು ಮತ್ತು ಕುರಿ ಸಾಕಾಣಿಕೆ, ಕೂಲಿನಾಲಿ ಮಾಡಿ ಬದುಕುತ್ತಿದೆ.
ಪರಿಶಿಷ್ಟ ಜಾತಿಯಲ್ಲಿ ಸುಮಾರು 50 ಜಾತಿಗಳನ್ನು ಸೇರಿಸಲಾಗಿದೆ. ಇದರಲ್ಲಿ ವಾಲ್ಮೀಕಿ ಜನಸಂಖ್ಯೆಯೇ ಅಧಿಕ. ಈ ವರ್ಗಕ್ಕೆ ಶೇ. 7.5 ರಷ್ಟು ಮೀಸಲಾತಿಯನ್ನು ನಿಗದಿ ಮಾಡಿದ್ದರೂ ಅನುದಾನ ಸಿಗುತ್ತಿರುವುದು ಕೇವಲ ಶೇ.3 ರಷ್ಟಾಗಿದೆ. ಆದರೆ, ಈ ಅನುದಾನ ಸಮರ್ಪಕವಾಗಿ ಜನಾಂಗಕ್ಕೆ ತಲುಪುತ್ತಿಲ್ಲ. ಏಕೆಂದರೆ, ಸುಳ್ಳು ಜಾತಿ ಪತ್ರಗಳನ್ನು ಪಡೆದಿರುವವರಿಗೆ ಇದರ ಅರ್ಧಪಾಲು ಸೇರುತ್ತಿದೆ. ಈ ಹಿನ್ನೆಲೆಯಲ್ಲಿ ಇಂತಹವರನ್ನು ಮಟ್ಟ ಹಾಕಿ ಶೇ. 7.5 ರಷ್ಟು ಮೀಸಲಾತಿ ನೀಡುವತ್ತ ಸರ್ಕಾರಗಳು ಗಮನಹರಿಸಬೇಕಿದೆ - ಸಿರಿಗೆರೆ ತಿಪ್ಪೇಶ್, ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ಅಧ್ಯಕ್ಷ.

No comments:

Post a Comment