Saturday 4 February 2012

ನೇಕಾರನ ಬದುಕಲ್ಲಿ ಕತ್ತಲಿಗೆ ಕಾರಣವೇನು?

ಕೈಲಾಸವಾಸಿ, ಅರ್ಧ ನಾರೀಶ್ವರ, ಚರ್ಮಧಾರಿ ಶಿವನಿಗೆ ತೊಡಲು ಬಟ್ಟೆ ಕೊಟ್ಟವರು ಇವರು.
ಹೀಗೊಂದು ಪ್ರತೀತಿ ಶತಶತಮಾನಗಳಿಂದ ಕೇಳಿ ಬರುತ್ತಿದೆ.
ಆದರೆ, ದೇವರಿಗೇ ಬಟ್ಟೆ ತೊಡಿಸಿದ್ದವರಿಗೆ ಈಗ ತೊಡಲು ಬಟ್ಟೆಯೂ ಇಲ್ಲದಂತಾಗಿದೆ. ಆಧುನಿಕತೆಯ ದಾಳಿಯಿಂದ ಇವರ ಬದುಕೇ ಮೂರಾಬಟ್ಟೆಯಾಗುವ ಸ್ಥಿತಿ ತಲುಪಿದೆ.
ಇಂತಹ ದುಸ್ತರ ಜೀವನಕ್ಕೆ ಸಾಕ್ಷಿಯಾಗುತ್ತಿರುವುದು ನೇಕಾರ ಸಮುದಾಯ.
ನೇಕಾರರು ನೇಯ್ದರೆ ಮಾನ ಮುಚ್ಚಲು ತುಂಡು ಬಟ್ಟೆ ಸಿಗುತ್ತದೆ. ಅದಿಲ್ಲದಿದ್ದರೆ, ಊಹಿಸಲೂ ಸಾಧ್ಯವಿಲ್ಲ.
ತಮಗೆ ತುಂಡು ಬಟ್ಟೆ ಇದ್ದರೂ ಸಾಕು, ಲಕ್ಷಾಂತರ ಜನರ ಮೈತುಂಬಾ ಧರಿಸುವ ಬಟ್ಟೆ ನೇಯ್ದುಕೊಡುತ್ತಾ ಬಂದಿರುವ ಈ ಸಮುದಾಯ ಆರ್ಥಿಕ, ಸಾಮಾಜಿಕವಾಗಿ ಹಿಂದುಳಿದಿರುವುದರಿಂದ ಪ್ರವರ್ಗ 2-ಎ ನಲ್ಲಿ ಗುರುತಿಸಲಾಗಿದೆ.
ನೇಕಾರ ಸಮುದಾಯ ಹುಟ್ಟಿಕೊಂಡ ಬಗ್ಗೆ ಒಂದು ಪ್ರತೀತಿ ಇದೆ. ಅದೆಂದರೆ, ದೇವರು ತನ್ನ ಜಿವ್ಹೆಯಿಂದ(ನಾಲಗೆ) ಒಂದು ಮಾನವ ರೂಪವನ್ನು ಸೃಷ್ಟಿಸಿದನು. ಇಡೀ ಮಾನವ ಸಂಕುಲದ ಮಾನ ಮುಚ್ಚಲು ನೀನು ಬಟ್ಟೆ ನೇಯುವಂತೆ ಈ ಮಾನವ ರೂಪಕ್ಕೆ ಆದೇಶ ನೀಡಿದನಂತೆ. ಅಂದಿನಿಂದ ನೇಕಾರಿಕೆ ಎಂಬ ವೃತ್ತಿ ಹುಟ್ಟಿಕೊಂಡಿತಂತೆ. ಈ ವೃತ್ತಿಯನ್ನು ಮುಂದುವರೆಸಿಕೊಂಡು ಬಂದಿರುವವರನ್ನು ನೇಕಾರರು ಎಂದು ಗುರುತಿಸಲಾಗಿದೆ.
ರಾಜ್ಯದಲ್ಲಿ ನೇಕಾರರಲ್ಲಿ ದೇವಾಂಗ, ಪದ್ಮಶಾಲಿ, ತೊಗಟವೀರ, ಪಟ್ಟಸಾಲೆ, ಕುರುಹಿನ ಶೆಟ್ಟಿ, ಸ್ವಕುಳ ಸಾಳಿ, ಸಾಳಿ, ಜಾಡ, ಹಠಗಾರ ಹೀಗೆ 26 ಉಪ ಪಂಗಡಗಳಿವೆ. ಈ ಎಲ್ಲಾ ಪಂಗಡಗಳು ಪ್ರತ್ಯೇಕವಾಗಿ ಗುರುತಿಸಿಕೊಂಡಿರುವುದೂ ನೇಕಾರ ಸಮುದಾಯ ಎಲ್ಲಾ ಕ್ಷೇತ್ರಗಳಲ್ಲಿ ಹಿಂದೆ ಬೀಳಲು ಕಾರಣ.
ಸಮುದಾಯಕ್ಕೆ ದೇವಾಂಗ ಜನಾಂಗ ಅಣ್ಣನ ಸ್ಥಾನದಲ್ಲಿ ನಿಲ್ಲುತ್ತದೆ. ದೇವರಿಗೆ ಅಂಗವಸ್ತ್ರವನ್ನು ನೀಡಿದ್ದರಿಂದ ದೇವಾಂಗರು ಎಂಬ ಹೆಸರು ಬಂದಿದೆ ಎಂಬ ಐತಿಹ್ಯ ಇದೆ.
ರಾಜ್ಯದಲ್ಲಿ ಬಹುತೇಕ ಎಲ್ಲಾ ಜಿಲ್ಲೆಗಳಲ್ಲಿ ನೇಕಾರ ಸಮುದಾಯದ ಕನಿಷ್ಟ ಒಂದಾದರೂ ಉಪಪಂಗಡ ಜನರು ವಾಸಿಸುತ್ತಿದ್ದಾರೆ. ಉತ್ತರ ಕರ್ನಾಟಕದಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿರುವ ನೇಕಾರರು ಹಳೆ ಮೈಸೂರು, ಮಲೆನಾಡು ಮತ್ತು ಕರಾವಳಿ ಪ್ರದೇಶದಲ್ಲಿ ಇದ್ದಾರಾದರೂ ಬಹಳ ಕಡಿಮೆ ಎಂದು ಹೇಳಬಹುದು. ಉತ್ತರ ಕರ್ನಾಟಕದ ಬಾಗಲಕೋಟೆ, ಚಿತ್ರದುರ್ಗ, ಬೆಳಗಾವಿ, ಬಿಜಾಪುರ, ಹುಬ್ಬಳ್ಳಿ ಸೇರಿದಂತೆ ಬಹುತೇಕ ಜಿಲ್ಲೆಗಳಲ್ಲಿ ಈ ಸಮುದಾಯ ಕಂಡು ಬರುತ್ತದೆ.
ಹೀಗೆ ರಾಜ್ಯದೆಲ್ಲೆಡೆ ಹರಿದು ಹಂಚಿ ಹೋಗಿರುವ ನೇಕಾರರ ಸಂಖ್ಯೆ 40 ಲಕ್ಷ ಇರಬಹುದು ಎಂಬ ಅಂದಾಜಿದೆ. ಈ ಬಗ್ಗೆ ಇನ್ನೂ ನಿಖರ ಅಂಕಿಅಂಶ ಲಭ್ಯವಾಗಿಲ್ಲ. ಏಕೆಂದರೆ, ಪಂಗಡಗಳಾಗಿ ಗುರುತಿಸಿಕೊಂಡಿರುವುದರಿಂದ ಜಾತಿ ಆಧಾರದ ಲೆಕ್ಕ ಇನ್ನೂ ಸಿಕ್ಕಿಲ್ಲ.
'ಸಮಾಜಕ್ಕೆ ಬಟ್ಟೆ ಕೊಟ್ಟ ನೇಕಾರನ ಹೆಂಡತಿ ಬೆತ್ತಲು. ಅವನ ಬದುಕು ಕತ್ತಲು'.
ನೇಕಾರರ ಇಂದಿನ ಸ್ಥಿತಿಗತಿ ಹೇಳಲು ಈ ಮಾರ್ಮಿಕ ನುಡಿ ಸಾಕು. ರಾಜ್ಯದಲ್ಲಿ ಇತ್ತೀಚಿನ ದಿನಗಳವರೆಗೆ ಮನೆಗೊಂದು ಕೈಮಗ್ಗಗಳಿದ್ದವು. ಒಂದು ರೇಷ್ಮೆ ಸೀರೆ ನೇಯಬೇಕಾದರೆ ಈ ಕೈಮಗ್ಗ ನೇಕಾರರಿಗೆ ಹತ್ತಾರು ದಿನಗಳೇ ಹಿಡಿಯುತ್ತಿದ್ದವು. ಕಲಾತ್ಮಕತೆಯ ಸೀರೆಗಳನ್ನು ಸಿದ್ಧಪಡಿಸುವ ಮೂಲಕ ನೇಕಾರರು ರಾಜ್ಯದ ಕಲಾ ಸಂಪತ್ತನ್ನು ವಿಶ್ವಕ್ಕೆ ತೋರಿಸಿಕೊಟ್ಟಿದ್ದರು.
ಆದರೆ, ಅಭಿವೃದ್ಧಿ ನೆಪದಲ್ಲಿ ಜಾರಿಗೆ ಬಂದ ಉದಾರೀಕರಣ, ಜಾಗತೀಕರಣಗಳೆಂಬ ಪೆಡಂಭೂತಗಳು ಈ ಕೈಮಗ್ಗ ನೇಕಾರರ ಹಸನಾದ ಬದುಕನ್ನು ಬರಡಾಗಿಸಿದವು. ಈಗ ಕೈಮಗ್ಗಗಳು ನೂಲು ಇಲ್ಲದ ಚರಕಗಳಂತಾಗಿವೆ. ಸ್ಥಿತಿವಂತರು ಮಾತ್ರ ಕೈಮಗ್ಗಗಳ ಜಾಗದಲ್ಲಿ ವಿದ್ಯುತ್ ಮಗ್ಗಗಳು ಸ್ಥಾಪಿತಗೊಂಡಿವೆ.
ವಿದ್ಯುತ್ ಮಗ್ಗಗಳಿಗೆ ಬಂಡವಾಳ ಹಾಕಲು ಸಾಧ್ಯವಾಗದ ಲಕ್ಷಾಂತರ ಕುಟುಂಬಗಳು ಸ್ಥಿತಿವಂತರ ಮಗ್ಗಗಳಲ್ಲಿ ಬಟ್ಟೆ ನೇಯುವ ಕೂಲಿ ಮಾಡುತ್ತಿದ್ದಾರೆ. ಇನ್ನೂ ಹಲವು ಕುಟುಂಬಗಳು ಕುಲಕಸುಬನ್ನೇ ಬಿಟ್ಟು ಪರ್ಯಾಯ ವೃತ್ತಿಗಳತ್ತ ಸಾಗಿದ್ದಾರೆ. ಭೂಮಿ ಇದ್ದವರು ಕೃಷಿ ಅವಲಂಬಿಸಿದ್ದಾರೆ. ಆದರೆ, ವಿದ್ಯುತ್ ಅಭಾವದಿಂದಾಗಿ ವಿದ್ಯುತ್ ಮಗ್ಗಗಳೂ ನೇಯ್ಗೆ ಸದ್ದು ನಿಲ್ಲಿಸಿವೆ. ಇದರ ಜತೆಗೆ ಅತಿಯಾದ ರೇಷ್ಮೆ ಮೇಲಿನ ತೆರಿಗೆ, ದುಬಾರಿ ವಿದ್ಯುತ್ ದರ ಸೇರಿದಂತೆ ಹತ್ತು ಹಲವು ಸಮಸ್ಯೆಗಳನ್ನು ಎದುರಿಸಲಾಗದೇ ವೃತ್ತಿಗೆ ತಿಲಾಂಜಲಿ ಹಾಕಿದ್ದಾರೆ.
ರಾಜ್ಯದೆಲ್ಲೆಡೆ ಸುತ್ತಾಡಿದರೆ, ಅಲ್ಲೊಂದು ಇಲ್ಲೊಂದು ಕೈಮಗ್ಗಗಳು ಸಿಗಬಹುದು. ಆದರೆ, ಹಠಕ್ಕೆ ಬಿದ್ದವರೆಂಬಂತೆ ಮೊಳಕಾಲ್ಮೂರು, ಸುರಪುರ ಮತ್ತು ಇಳಕಲ್್ನಲ್ಲಿ ನೇಕಾರರು ಇನ್ನೂ ಕೈಮಗ್ಗಗಳನ್ನು ಇಟ್ಟುಕೊಂಡು ತಮ್ಮ ವೃತ್ತಿಯನ್ನು ಮುಂದುವರೆಸಿದ್ದಾರೆ.
ಯಾವುದೇ ಒಂದು ಸಮುದಾಯದ ಆರ್ಥಿಕ ಮತ್ತು ಸಾಮಾಜಿಕ ಪರಿಸ್ಥಿತಿ ಉತ್ತಮವಾಗಿದ್ದರೆ ಮಾತ್ರ ಶೈಕ್ಷಣಿಕ ಪರಿಸ್ಥಿತಿಯೂ ಉತ್ತಮವಾಗಿರಲು ಸಾಧ್ಯ. ಆದರೆ, ನೇಕಾರರ ಸಮುದಾಯ ಈ ಕ್ಷೇತ್ರಗಳಲ್ಲಿ ಸಂಕಷ್ಟಕ್ಕೆ ಸಿಲುಕಿ ಒದ್ದಾಡುತ್ತಿದೆ. ಇದರಿಂದ ಹೊರಬರಲು ಇನ್ನೂ ಸಾಧ್ಯವಾಗಿಲ್ಲ.
ಇದಕ್ಕೆ ಪ್ರಮುಖ ಕಾರಣ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ದೊರೆಯದ ಪ್ರಾಧಾನ್ಯತೆ. ಮತ್ತೊಂದು ಪ್ರಮುಖ ಕಾರಣವೆಂದರೆ, ನೇಕಾರ ಸಮುದಾಯದ 26 ಕ್ಕೂ ಹೆಚ್ಚು ಉಪಪಂಗಡಗಳು ಒಗ್ಗಟ್ಟು ಪ್ರದರ್ಶಿಸದಿರುವುದು.
ಸರ್ಕಾರಗಳು ರಾಜ್ಯದಲ್ಲಿ ನೇಕಾರಿಕೆಗೆ ಕೃಷಿಯ ನಂತರದ ಸ್ಥಾನ ನೀಡುತ್ತಾ ಬಂದಿವೆ. ಆದರೆ, ಸರ್ಕಾರದ ಹತ್ತು ಹಲವು ಕಾರ್ಯಕ್ರಮಗಳು ನೇರವಾಗಿ ನೇಕಾರರಿಗೆ ತಲುಪುವ ಬದಲು ಮಾರ್ಗಮಧ್ಯದಲ್ಲೇ ಮಧ್ಯವರ್ತಿಗಳ ಕಬಂಧಬಾಹುಗಳಿಗೆ ಸಿಲುಕುತ್ತಿವೆ. ಹೀಗಾಗಿ ಸಮುದಾಯ ಸರ್ಕಾರಿ ಪ್ರಾಯೋಜಿತ ಕಾರ್ಯಕ್ರಮಗಳಿಂದ ವಂಚಿತವಾಗುತ್ತಿದೆ.
ಇನ್ನು ರಾಜಕೀಯ ಪ್ರಾತಿನಿಧ್ಯ ವಿಚಾರದಲ್ಲಿ ವೈಯಕ್ತಿಕ ವರ್ಚಸ್ಸಿನಲ್ಲಿ ಮುಂದೆ ಬಂದವರು ಮಾತ್ರ ರಾಜಕೀಯ ಕ್ಷೇತ್ರದಲ್ಲಿ ಬೆಳವಣಿಗೆ ಕಂಡಿದ್ದಾರೆ. ನಾಲ್ಕನೇ ಅತಿ ದೊಡ್ಡ ಸಮುದಾಯ ಎಂದು ಬಿಂಬಿತವಾಗಿರುವ ಈ ಸಮುದಾಯಕ್ಕೆ ರಾಜಕೀಯ ಪಕ್ಷಗಳು ನೀಡಿರುವ ಪ್ರಾತಿನಿಧ್ಯ ಹೇಳಿಕೊಳ್ಳುವಂತಿಲ್ಲ.
ಆದರೂ, ಕೆ.ಸಿ. ಕೊಂಡಯ್ಯ, ಉಮಾಶ್ರೀ, ಎಂ.ಡಿ. ಲಕ್ಷ್ಮೀನಾರಾಯಣ, ಮಲ್ಲಿಕಾರ್ಜುನ ಬನ್ನಿ, ಮಲ್ಲಿಕಾರ್ಜುನ ನಾಗಪ್ಪ, ಕುಂಬ್ಳೆ ಸುಂದರರಾವ್ ಸೇರಿದಂತೆ ಬೆರಳೆಣಿಕೆಯಷ್ಟು ಜನ ಮಾತ್ರ ರಾಜಕೀಯದಲ್ಲಿ ಹೆಸರು ಮಾಡುತ್ತಿದ್ದಾರೆ.
ಸಮಾಜದ ಮುಖ್ಯವಾಹಿನಿಗೆ ಸಮುದಾಯವನ್ನು ತರುವ ನಿಟ್ಟಿನಲ್ಲಿ ಕೆಲವು ನಾಯಕರು ಬದ್ಧತೆ ತೋರಿದ್ದು, ಇದಕ್ಕಾಗಿ ಎಲ್ಲಾ ಉಪಪಂಗಡಗಳನ್ನು ಒಂದೇ ಸೂರಿನಡಿ ತರುವ ಪ್ರಯತ್ನ ನಡೆಸಿದ್ದಾರೆ.
ರಾಜ್ಯದಲ್ಲಿ ಪ್ರಮುಖ ಸಮುದಾಯವಾದ ನೇಕಾರ ಮತ್ತು ಇತರೆ ಪಂಗಡಗಳಿಗೆ ಸೂಕ್ತ ಪ್ರಾತಿನಿಧ್ಯ ಸಿಗುತ್ತಿಲ್ಲ. ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ರಾಜಕೀಯ ಕ್ಷೇತ್ರದಲ್ಲಿ ತೀರಾ ಹಿಂದುಳಿದಿರುವ ಈ ಸಮುದಾಯದ ಅಭಿವೃದ್ಧಿಗೆ ಸರ್ಕಾರಗಳು ಒತ್ತು ನೀಡಬೇಕಿದೆ. ಹರಿದು ಹಂಚಿ ಹೋಗಿರುವ ಸಮುದಾಯದ ಎಲ್ಲಾ ಪಂಗಡಗಳನ್ನು ಒಂದೇ ವೇದಿಕೆಯಡಿ ತಂದು ಅದರ ಶ್ರೇಯೋಭಿವೃದ್ಧಿಗೆ ಒಕ್ಕೂಟ ಮುನ್ನುಡಿ ಬರೆದಿದೆ - ಚಂದ್ರಕಾಂತ ಎನ್. ಭಂಡಾರೆ, ಉಪಾಧ್ಯಕ್ಷ, ಕರ್ನಾಟಕ ರಾಜ್ಯ ನೇಕಾರ ಸಮುದಾಯಗಳ ಒಕ್ಕೂಟ.

1 comment: